ರಾಮನಗರ: ಚನ್ನಪಟ್ಟಣ ಅಂದ್ರೆ ಬೊಂಬೆನಾಡು ಅಂತಾನೇ ಹೆಸರುವಾಸಿ. ಆದರೆ ಇದೀಗ ಬೊಂಬೆನಾಡಿನ ಕರಕುಶಲಕರ್ಮಿಗಳು ಕೊರೊನಾದಿಂದಾಗಿ ಸಂಕಷ್ಟ ಎದುರಿಸುವಂತಾಗಿದ್ದು, ದಸರಾ ಸಮಯದಲ್ಲಿ ಬೊಂಬೆಗಳು ಮಾರಾಟವಾಗದೆ ಉದ್ಯಮ ಸಂಕಷ್ಟಕ್ಕೆ ಸಿಲುಕಿರುವುದರ ಜೊತೆಗೆ ಕಲಾವಿದರ ಜೀವನ ದುರ್ಗಮ ಹಾದಿಗೆ ತೆರೆದುಕೊಂಡಿದೆ.
ವಿಶ್ವದ ಮೂಲೆಮೂಲೆಗೂ ರಫ್ತಾಗುತ್ತಿದ್ದ ಇಲ್ಲಿನ ಗೊಂಬೆಗಳು ಈಗ ಅಂಗಡಿಗಳಲ್ಲೇ ಧೂಳು ಹಿಡಿಯುತ್ತಿವೆ. ಪ್ರತಿ ವರ್ಷ ದಸರಾ ಆರಂಭಕ್ಕೂ ಮುನ್ನಾ ಇಲ್ಲಿನ ಗೊಂಬೆಗಳಿಗೆ ಇನ್ನಿಲ್ಲದ ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾ ಜೊತೆಗೆ ಸರಳ ದಸರಾ ಆಚರಣೆ ಹಿನ್ನೆಲೆ ಬೊಂಬೆ ಮಾರಾಟದಲ್ಲಿ ಇಳಿಕೆ ಕಂಡಿದೆ.
ರಾಮನಗರ-ಚನ್ನಪಟ್ಟಣದಿಂದ ಮೈಸೂರು ಹೆದ್ದಾರಿಯಲ್ಲಿ ಇರುವ ಹತ್ತಾರು ಬೊಂಬೆಗಳ ಶೋ ರೂಮ್ಸ್‌ಗಳಿಗೆ ಗ್ರಾಹಕರು ಭೇಟಿ ನೀಡಿ ಖರೀದಿಯಲ್ಲಿ ತೊಡಗುತ್ತಿದ್ದರು. ಆದರೆ ಲಾಕ್ಡೌನ್ ಹಿನ್ನೆಲೆ ಹಾಗೂ ಕೊರೊನಾದಿಂದಾಗಿಯೂ ಬೊಂಬೆಗಳ ಖರೀದಿಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.
ಇನ್ನು ಪ್ರವಾಸಿಗರಿಲ್ಲದೇ ಶೋ ರೂಮ್‌ಗಳಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಜೊತೆಗೆ ತಯಾರಾದ ಗೊಂಬೆಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಿರುವುದು ಕೂಡ ಮತ್ತೊಂದು ಸಂಕಟ ತಂದೊಡ್ಡಿದೆ. ಇನ್ನು ಖರೀದಿ ಮಾಡಬೇಕಾದ ಗ್ರಾಹಕರಲ್ಲೂ ಸಹ ಹಣದ ಕೊರತೆ ಎದುರಾಗಿದೆ.