ಬೆಳಗಾವಿ: ತನಿಖೆ ಮುಗಿಯುವವರೆಗೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿ. ದಸರಾ ಕಾರ್ಯಕ್ರಮಕ್ಕೆ ಹೋಗಿ ಚಾಲನೆ ಕೊಟ್ಟಿದ್ದೀರಿ. ಇದರಿಂದ ಸರ್ಕಾರದ ಮೇಲೆ ಜನರಿಗೆ ವಿಶ್ವಾಸ ಕಡಿಮೆ ಆಗುತ್ತದೆ. ಇಷ್ಟೆಲ್ಲ ಆದರೂ ರಾಜೀನಾಮೆ ಕೊಡಲಿಲ್ಲ ಅಂದರೆ ಇದು ಸಿದ್ದರಾಮಯ್ಯನವರ ಭಂಡತನ ಎಂದು ಸಂಸದ ಜಗದೀಶ್ ಶೆಟ್ಟರ್ ಟೀಕಿಸಿದರು.
ಬೆಳಗಾವಿಯಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಹೊಸ ಆರೋಪ ಬಂದಿದೆ. ರಾಜ್ಯಪಾಲರು ತನಿಖೆಗೆ ಕೊಟ್ಟಾಗ ರಾಜ್ಯಪಾಲರಿಗೆ ಚಾಲೆಂಜ್ ಮಾಡಿದರು. ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಹೈಕೋರ್ಟ್ ಆದೇಶವನ್ನು ಅಪೀಲ್ ಮಾಡಿ ಸುಪ್ರೀಂ ಕೋರ್ಟ್ಗೆ ಹೋಗಬಹುದಿತ್ತು. ಅವರ ವಕೀಲರೇ ಅಡ್ವೈಸ್ ಮಾಡಿರಬಹುದು. ಮೇಲೆ ಹೋದರೂ ಅದೇ ಹಣೆಬರಹ ನಿಮ್ಮದೆಂದು ಹೇಳಿರಬಹುದು. ಹಾಗಾಗಿ, ಈಗ ಎಫ್ಐಆರ್ ದಾಖಲಾಗಿದೆ, ತನಿಖೆ ನಡೆಯುತ್ತಿದೆ ಎಂದರು.
ಸಿದ್ದರಾಮಯ್ಯ 14 ಸೈಟ್ಗಳನ್ನು ವಾಪಸ್ ಕೊಡುವ ಮೂಲಕ ಕಳ್ಳತನ ಮಾಡಿದ್ದಾರೆ ಎಂದು ಗೊತ್ತಾಗಿದೆ. ತಾನು ವಕೀಲನಾಗಿದ್ದೂ ತಪ್ಪು ಮಾಡಿದ್ದಾರೆ. ಹತ್ತು ವರ್ಷಗಳಿಂದ ಅಭಿವೃದ್ಧಿಯಾಗಿರುವ ಬಡಾವಣೆಯಲ್ಲಿ ಸೈಟ್ ತೆಗೆದುಕೊಂಡಿದ್ದಾರೆ. ಆ ಜಮೀನಿನ ಬಗ್ಗೆ ಪ್ರತಿಯೊಂದು ಹಂತದಲ್ಲಿ ತಪ್ಪು ಮಾಡಿಕೊಂಡೇ ಬಂದಿದ್ದಾರೆ ಎಂದು ಆರೋಪಿಸಿದರು.
ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ಕೊಡಬೇಕು ಅಂತಾ ಮೊದಲಿನಿಂದಲೂ ಹೇಳಿದ್ದೇವೆ. ಈಗಲೂ ಅದನ್ನೇ ಹೇಳುತ್ತೇವೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಪರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆಗೆ, ಹಿತಾಸಕ್ತಿಯಿಂದ ಹೇಳಿಕೆ ಕೊಟ್ಟಿದ್ದಾರೆ. ಅವರ ಹೇಳಿಕೆಯಿಂದ ಸಿಎಂ ಏನೂ ಸಾಚಾ ಆಗುವುದಿಲ್ಲ ಎಂದು ಹೇಳಿದರು.
ವೈಜ್ಞಾನಿಕವಾಗಿ ಬೆಳಗಾವಿ ಜಿಲ್ಲೆ ವಿಭಜನೆ ಆಗಲಿ: ಬೆಳಗಾವಿ ಜಿಲ್ಲಾ ವಿಭಜನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ದೊಡ್ಡ ದೊಡ್ಡ ಜಿಲ್ಲೆಗಳನ್ನು ಹಾಗೂ ತಾಲೂಕುಗಳನ್ನು ವಿಭಜನೆ ಮಾಡಬೇಕು. ಸರ್ಕಾರದ ಆಡಳಿತ ಜನರ ಮನೆ ಬಾಗಿಲಿಗೆ ಹೋಗಿ ತಲುಪಬೇಕು. ಜಿಲ್ಲೆ ಹಾಗೂ ತಾಲೂಕುಗಳನ್ನು ವಿಂಗಡಣೆ ಮಾಡುವ ಅವಶ್ಯಕತೆ ಬಹಳಷ್ಟಿದೆ ಎಂದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ ಎಂದು ಎಲ್ಲೂ ಹೇಳಿಲ್ಲ: ಜಗದೀಶ್ ಶೆಟ್ಟರ್ - Jagadish Shettar