ರಾಮನಗರ: ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಕೊರೊನಾ ಭೀತಿಯಲ್ಲಿ ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸಿ ಕಾನೂನಾತ್ಮಕ ರೀತಿಯಲ್ಲಿ ಉತ್ತೇಜನ ನೀಡುವಂತೆ ಕೋರಿ ಜಿಲ್ಲಾ ಪ್ರವಾಸೋದ್ಯಮ ಸಂಘದ ಸದಸ್ಯರು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಹೋಮ್ ಸ್ಟೇ, ಸಾಹಸ ಚಟುವಟಿಕೆಗಳು, ರೆಸಾರ್ಟ್ ಹಾಗೂ ಪರಿಸರಸ್ನೇಹಿ ಪ್ರವಾಸೋದ್ಯಮ ಚಟುವಟಿಕೆಗಳು ನಡೆಯುತ್ತಾ ಬಂದಿವೆ. ಸದ್ಯ ಕೋವಿಡ್ ಭೀತಿಯಿಂದಾಗಿ ಈ ಚಟುವಟಿಕೆಗಳು ನಿಂತುಹೋಗಿವೆ. ಪರಿಣಾಮ ಕಾರ್ಮಿಕರು ಬೀದಿಗೆ ಬಿದ್ದಿದ್ದು ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಉದ್ದಿಮೆ ಪುನರಾರಂಭಕ್ಕೆ ಸರ್ಕಾರ ಅನುಮತಿಸಿದರೂ ಸಹ ಸ್ಥಳೀಯರು ಹಾಗೂ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೆಲವು ಅಧಿಕಾರಿಗಳು, ಆರ್‌ಟಿಐ ಕಾರ್ಯಕರ್ತರು ಹಾಗೂ ಪತ್ರಕರ್ತರು ’ಅಕ್ರಮ ಚಟುವಟಿಕೆ’ ಎಂಬ ಪದ ಬಳಸಿ ಪ್ರವಾಸೋದ್ಯಮಕ್ಕೆ ತೊಂದರೆ ಕೊಡುತ್ತಿದ್ದು ಅದನ್ನು ತಡೆಯಬೇಕು. ಗ್ರಾ.ಪಂ ವತಿಯಿಂದ ಪರವಾನಗಿ ನವೀಕರಣಕ್ಕೆ ಬದಲಾಗಿ ವಾರ್ಷಿಕ ಶುಲ್ಕ ಎಂದು ಪಡೆದುಕೊಳ್ಳಬೇಕು. ಪ್ರತಿ ವರ್ಷ ಹೊಸತಾಗಿ ಎನ್‌ಒಸಿ ಪಡೆಯಲು ಇರುವ ಸೂಚನೆಯನ್ನು ರದ್ದುಗೊಳಿಸಬೇಕು. ಈಗಾಗಲೇ ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಮಾಡಬೇಕು. ಕೋವಿಡ್‌ನಿಂದ ನಷ್ಟವಾಗಿರುವ ಕಾರಣ ಪಂಚಾಯಿತಿ ಶುಲ್ಕ ಹಾಗೂ ಬೆಸ್ಕಾಂನ ನಿಗದಿತ ಶುಲ್ಕದಲ್ಲಿ ಶೇ 50ರಷ್ಟು ವಿನಾಯಿತಿ ನೀಡಬೇಕು. ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ವತಿಯಿಂದ ಸಾಹಸ ಪ್ರವಾಸೋದ್ಯಮಕ್ಕೆ ಅನುಮತಿ ಹಾಗೂ ತರಬೇತಿ ನೀಡಲು ಸಹಕರಿಸಬೇಕು. ಅರಣ್ಯ ಇಲಾಖೆ ಹಾಗೂ ಅಬಕಾರಿ ಇಲಾಖೆ ವತಿಯಿಂದ ಬೇಕಾಗುವ ಅನುಮತಿಗೆ ಸರಳೀಕೃತವಾದ ಕಾನೂನು ತರಬೇಕು ಎಂದು ಕೋರಿದ್ದಾರೆ.
ಈ ವೇಳೆ ಸಂಘದ ಅಧ್ಯಕ್ಷ ಎಂ.ಡಿ. ವಿಜಯ ದೇವ್, ಉಪಾಧ್ಯಕ್ಷ ರಮೇಶ್, ಪ್ರಧಾನ ಕಾರ್ಯದರ್ಶಿ ಅರುಣೇಶ ಸೇರಿದಂತೆ ಹಲವರಿದ್ದರು.