ರಾಯಚೂರು:ಕೆಡಿಪಿ ಸಭೆಯಲ್ಲಿ ಲಿಂಗಸುಗೂರು ತಾಲೂಕಿನ ಆನೆಹೊಸೂರು ಕ್ಷೇತ್ರದ ಜಿ.ಪಂ ಸದಸ್ಯ ಬಸವರಾಜ ರಾಷ್ಟ್ರೀಯ ಕುಡಿಯುವ ನೀರು ಸರಬರಾಜು ಯೋಜನೆಯ ಪ್ರಭಾರಿ ಎಇಇ ಗಣಪತಿ ಸಕ್ರಿ ಅವರಿಗೆ ಏಕವಚನದಲ್ಲಿ ಮಾತನಾಡಿದ ಘಟನೆ ನಡೆದಿದೆ.
ಅವಾಜ್ ಹಾಕಿದ್ದಲ್ಲದೇ ಏಕವಚನದಲ್ಲಿ ಮಾತನಾಡಿ ಅಧಿಕಾರಿಯಾಗಲು ನೀನ್ಯಾವ ಲಾಯಕ್ಕಿಲ್ಲ ಎಂದು ನಾಲಿಗೆ ಹರಿ ಬಿಟ್ಟ ಘಟನೆ ನಡೆಯಿತು. ಕುಡಿಯುವ ನೀರಿನ ಕಾಮಗಾರಿ ವಿಳಂಬದ ಕುರಿತು ಚರ್ಚೆ ನಡೆಯುತ್ತಿರುವಾಗ ತಮ್ಮ ಕ್ಷೇತ್ರದಲ್ಲಿ ಕೆರೆ ನಿರ್ಮಿಸಿ ನೀರು ಸಂಗ್ರಹಿಸುವ ಕಾಮಗಾರಿ ಕಳೆದ 6 ವರ್ಷಗಳಿಂದ ಕೆರೆಗಳ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಸಭೆಯಲ್ಲಿ ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿಯ ಅಧ್ಯಕ್ಷ ಬಸವರಾಜ ಕಲ್ಯಾಣಪ್ಪ ಹಿರೇಗೌಡ್ರು ಪ್ರಶ್ನಿಸಿದರು. ಇದಕ್ಕೆ ಎನ್ ಅರ್ ಡಬ್ಲ್ಯೂಪಿ.(ನ್ಯಾಷನಲ್ ರೂರಲ್ ವಾಟರ್ ಸಪ್ಲೈ) ಪ್ರಭಾರಿ ಎಇಇ ಗಣಪತಿ ಸಾಕ್ರೆ ಉತ್ತರಿಸಿ ಅಧಿಕಾರಿ ಹಾಗೂ ತಾಂತ್ರಿಕ ಕಾರಣಗಳಿಂದ ಯೋಜನೆ ಪೂರ್ಣವಾಗುತ್ತಿಲ್ಲ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿದೆ ಈ ವಿಳಂಬಕ್ಕೆ ನಾನು ಕಾರಣವಲ್ಲ ಎಂದಾಗ ಇಷ್ಟುವರ್ಷಗಳಾದ್ರೂ ಕಾಮಗಾರಿ ಪೂರ್ಣಗೊಂಡಿಲ್ಲವೆಂದರೆ ನೀವೇ ಕಾರಣ ಎಂದು ಬಸವರಾಜ ಹಿರೇಗೌಡ್ರು ಏಕವಚನದಲ್ಲಿ ಮಾತನಾಡುತ್ತಾ ನೀನು ಅಧಿಕಾರಿ ಹುದ್ದೆಗೆ ಲಾಯಕ್ಕಿಲ್ಲ ಎಂದು ನಾಲಿಗೆ ಹರಿಬಿಟ್ಟರು.
ಇದರಿಂದ ಒಂದು ಕ್ಷಣ ವಿಚಲಿತರಾದ ಸಾಕ್ರೆ ನೀವು ಸೌಜನ್ಯದಿಂದ ಮಾತನಾಡಿ ಎಂದು ಉತ್ತರಿಸಿದಾಗ ಮಾತಿಗೆ ಮಾತು ಬೆಳೆಯಿತು.ಈ ನಡುವೆ ಜಿಲ್ಲಾ ಪಂಚಾಯತಿ ಸಿ.ಇ. ಓ ಲಕ್ಷ್ಮಿಕಾಂತ್ ರೆಡ್ಡಿ ಮಧ್ಯ ಪ್ರವೇಶಿಸಿ ಅಧಿಕಾರಿಗಳಿಗೆ ಈ ರೀತಿ ಭಾಷೆ ಬಳಸಬೇಡಿ ಸೌಜನ್ಯದಿಂದ ವರ್ತಿಸಿ ನಿಮಗೆ ಅವರ ಮೇಲೆ ಆಕ್ರೋಶವಿದ್ರೂ ಕೂಡ ಕಾನೂನು ಚೌಕಟ್ಟಿನಲ್ಲಿ ವರ್ತಿಸಬೇಕೆಂದು ಹೇಳಿದಾಗ ಪರಿಸ್ಥಿತಿ ಹತೋಟಿಗೆ ಬಂತು.
ವಿದ್ಯಾರ್ಥಿಗಳಿಗೆ ಕಳಪೆ ಸಾಕ್ಸ್ ವಿತರಣೆ:
ಸಭೆಯಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಕಳಪೆ ಸಾಕ್ಸ್ ವಿತರಣೆ ಮಾಡಲಾಗುತ್ತಿದೆ ಎಂದು ಬಸವರಾಜ ಹಿರೇಗೌಡ್ರು ಆರೋಪಿಸಿ ಸರಕಾರದಿಂದ ಮಾನ್ಯತೆ ಪಡೆಯದ ಕಂಪನಿಯಿಂದ ಕಳಪೆ ಮಟ್ಟದ ಸಾಕ್ಸ್ ವಿತರಣೆ ಮಾಡಲಾಗುತ್ತಿದೆ ಇದು ಸಾಬಿತಾಗಿದ್ರೂ ಯಾವುದೇ ಶಿಕ್ಷೆಯಾಗಿಲ್ಲ ಎಂದು ಗುಡುಗಿದರು. ಇದಕ್ಕೆ ಸಿ.ಇಓ ಲಕ್ಷ್ಮಿಕಾಂತ್ ಪ್ರತಿಕ್ರಿಯೆ ನೀಡಿ ಈ ಕುರಿತು ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಯಾರೇ ತಪ್ಪೆಸಗಿದ್ದಲ್ಲಿಶಿಕ್ಷೆಗೆ ಗುರಿಯಾಗುತ್ತಾರೆ ಎಂದು ತಿಳಿಸಿದರು.