ರಾಯಚೂರು: ಮೂಗಿನ ಸಮಸ್ಯೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಮೃತಪಟ್ಟಿದ್ದು, ಈ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಪೋಷಕರು ರಾಯಚೂರಿನ ರಿಮ್ಸ್ ಆಸ್ಪತ್ರೆಯ ಎದುರು ಪ್ರತಿಭಟಿಸಿದರು. ನಗರದ ದೇವಿ ನಗರ ನಗರದ ನಿವಾಸಿ ರಾಜೇಶ್ವರಿ (18) ಮೃತಳಾದ ಯುವತಿ.
ಯುವತಿ ರಿಮ್ಸ್ ನಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದು, ಬರುವ ಜನವರಿ 10ಕ್ಕೆ ನರ್ಸಿಂಗ್ ಕೋರ್ಸ್ಗೆ ಅಡ್ಮಿಷನ್ ಮಾಡಬೇಕಿತ್ತು. ಆದರೆ, ಮೂಗಿನ ಸಮಸ್ಯೆ ಇದೆ ಎಂದು ಯುವತಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ನಾಲ್ಕು ದಿನದ ಬಳಿಕ ಶನಿವಾರ ಏಕಾ ಏಕಿ ಸಾವಿಗೀಡಾಗಿದ್ದು, ಅನುಮಾನ ಹುಟ್ಟು ಹಾಕಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ರಿಮ್ಸ್ ಆಸ್ಪತ್ರೆಗೆ ದಾಖಲಾದ ಬಳಿಕ ರಾಜೇಶ್ವರಿ ಯುವತಿಗೆ ಚಿಕಿತ್ಸೆ, ವೈದ್ಯರು ಶನಿವಾರ ಆಪರೇಷನ್ ಮಾಡಿದ್ದರು. ಆದರೆ, ವೈದ್ಯರು ಬೇಜವಾಬ್ದಾರಿಯಿಂದ ನಮ್ಮ ಮಗಳು ಸಾವಿಗೀಡಾಗಿದ್ದಾರೆ ಎಂದು ಪೋಷಕರು ಆಪಾದಿಸಿದ್ದಾರೆ.
ಇದಕ್ಕೆಲ್ಲ ಇವರ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಆರೋಪಿಸಿ ನೂರಾರು ಜನರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂಓದಿ:ಛಾಪ್ರಾದ ಮದ್ಯ ದುರಂತ; ಮಾಸ್ಟರ್ ಮೈಂಡ್ ಬಂಧನ
ರಿಮ್ಸ್ ಆಸ್ಪತ್ರೆ ನಿರ್ದೇಶಕ ಬಸವರಾಜ್ ಪೀರಾಪೂರ: ಡಿಸೆಂಬರ್ 26ರಂದು ಮಧ್ಯಾಹ್ನ ರಿಮ್ಸ್ ಆಸ್ಪತ್ರೆಗೆ ರಾಜೇಶ್ವರಿ ದಾಖಲಾಗಿದ್ದರು. ಮೂಗಿನ ಮೂಳೆ ಒಳಭಾಗದಲ್ಲಿ ಒಂದು ಕಡೆ ವಾಲಿತ್ತು. ಇದರಿಂದ ಉಸಿರಾಟಕ್ಕೆ ತೊಂದರೆ ಆಗುತ್ತೆ. ಅದರ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಬೇಕಾದ ಎಲ್ಲಾ ಅಗತ್ಯ ಇಎನ್ಟಿ ವಿಭಾಗ ಮಾಡಿಕೊಂಡಿತ್ತು. ರಾಜೇಶ್ವರಿಗೆ ಹಿಮೋಗ್ಲೋಬಿನ್ ಕಡಿಮೆ ಇತ್ತು. ಎರಡು ಪಾಯಿಂಟ್ ಬ್ಲಡ್ ನೀಡಲಾಗಿತ್ತು. ಯುವತಿಗೆ ಹಿಮೋಗ್ಲೋಬಿನ್ ಹೆಚ್ಚಳವಾದ ಬಳಿಕ ಡಿಸೆಂಬರ್ 30ರಂದು ಆಪರೇಷನ್ ಮಾಡಿದ್ದಾರೆ.
ಆಪರೇಷನ್ ವೇಳೆಯೂ ಯುವತಿಗೆ ಏನೂ ಆಗಿಲ್ಲ. ಆಪರೇಷನ್ ನಂತರವೂ ಏನೂ ಆಗಿಲ್ಲ. ಆ ನಂತರ ಉಸಿರಾಟ ಹೆಚ್ಚಳವಾಗಿ ಬಿಪಿ ಕಡಿಮೆಯಾಗಿದೆ. ಹೀಗಾಗಿ ಯುವತಿಗೆ ಚಿಕಿತ್ಸೆ ನೀಡಿದ ಬಳಿಕ ಯುವತಿಯ ಬಿಪಿ ನಾರ್ಮಲ್ ಆಯ್ತು. ರಾತ್ರಿ ವೇಳೆ ಮತ್ತೆ ಉಸಿರಾಟ ಹೆಚ್ವಳವಾಗಿತ್ತು. ನಮ್ಮ ವೈದ್ಯರ ತಂಡ ಸತತ ಪ್ರಯತ್ನ ಮಾಡಿದ್ದರೂ, ಯುವತಿಯ ಜೀವ ಉಳಿಸಲು ಆಗಿಲ್ಲ. ನಾವು ಇಂತಹ 350 ಆಪರೇಷನ್ ಮಾಡಿದ್ದೇವೆ. ಯಾವ ರೋಗಿಗೂ ಹೀಗೆ ಆಗಿಲ್ಲ. ಈ ಘಟನೆ ಕುರಿತು ತನಿಖೆಗೆ ಒಂದು ತಂಡ ರಚನೆ ಮಾಡಿ, ತನಿಖೆ ನಡೆಸುತ್ತೇವೆ. ಈ ಸಾವಿಗೆ ಏನು ಕಾರಣವೆಂಬುದನ್ನು ಪತ್ತೆ ಮಾಡುತ್ತೇವೆ. ವಾರದೊಳಗೆ ವರದಿ ಪಡೆದುಕೊಂಡು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಿಮ್ಸ್ ನಿರ್ದೇಶಕ ತಿಳಿಸಿದ್ದಾರೆ.