ರಾಯಚೂರು: ರಜೆ ಮೇಲೆ ತವರಿಗೆ ಬಂದಿದ್ದ ಯೋಧ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಸಿಂಧನೂರು ತಾಲೂಕಿನ ಅಲಬನೂರಿ ಗ್ರಾಮದ ಯೋಧ ಶಿವಕುಮಾರ (34) ಹೃದಯಾಘಾತದಿಂದ ಮೃತಪಟ್ಟವರು. ರಾಜಸ್ಥಾನದ ಜೋದಪುರದಲ್ಲಿ ಸೈನಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಶಿವಕುಮಾರ್ ವಾರದ ರಜೆ ಮೇಲೆ ಸ್ವಗ್ರಾಮಕ್ಕೆ ಬಂದ ವೇಳೆ ಈ ದುರ್ಘಟನೆ ನಡೆದಿದೆ.
ಶಿವಕುಮಾರ್ ಕಳೆದ 15 ವರ್ಷಗಳಿಂದ ಸೈನಿಕರಾಗಿ ಸೇವೆ ಸಲ್ಲಿಸಿದ್ದು, ಈ ಮುಂಚೆಯೂ ಎರಡು ಬಾರಿ ಹೃದಯಾಘಾತ ಕಾಣಿಸಿಕೊಂಡಿತ್ತು ಎನ್ನಲಾಗ್ತಿದೆ. ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ಮಧ್ಯರಾತ್ರಿ ಯೋಧ ಕೊನೆಯುಸಿರೆಳೆದಿದ್ದಾರೆ. ಸ್ವಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ. ಯೋಧನ ಅಗಲಿಕೆಯಿಂದ ಅಲಬನೂರಲ್ಲಿ ನೀರವ ಮೌನ ಆವರಿಸಿದೆ.