ರಾಯಚೂರು: ಕೊರೊನಾ ಶಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಲು ನಗರದ ರಿಮ್ಸ್ನಲ್ಲಿ ಪ್ರಯೋಗಾಲಯಕ್ಕೆ ಸ್ಥಾಪನೆ ಕಾರ್ಯ ನಡೆದಿದೆ. ನಗರದ ಹೊರವಲಯದ ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷಾ ಕೇಂದ್ರ ಸ್ಥಾಪನೆ ಕಾಮಗಾರಿ ನಡೆಯುತ್ತಿದೆ. ಪರೀಕ್ಷಾ ಕೇಂದ್ರದ ಸಿವಿಲ್ ಕಾಮಗಾರಿ ಮುಗಿದಿವೆ. ಲ್ಯಾಬ್ಗೆ ಸಂಬಂಧಿಸಿದ ಉಪಕರಣಗಳು ಬಂದಿದ್ದು, ಅದರ ಜೋಡಣೆ ಕಾರ್ಯ ನಡೆಸಲಾಗುತ್ತಿದೆ.
ಉಪಕರಣಗಳನ್ನು ಆಳವಡಿಕೆ ಮಾಡುವ ಇಂಜಿನಿಯರ್ ಆಗಮಿಸಿದ್ದು, ಸಹ ಎರಡು-ಮೂರು ದಿನಗಳಲ್ಲಿ ಉಪಕರಣ ಆಳವಡಿಕೆಯಾಗಲಿದೆ. ಬಳಿಕ ಐಸಿಎಂಆರ್ಗೆ ಅನುಮತಿ ಕೋರಲಾಗುವುದು. ಅಗತ್ಯ ಮೂಲಭೂತ ಸೌಕರ್ಯಗಳು ಸಿದ್ಧಗೊಂಡಿರುವುದರಿಂದ ಅವರು ಕೂಡಲೇ ಅನುಮತಿ ನೀಡುವ ಸಾಧ್ಯತೆ ಇದೆ.
ಅಲ್ಲದೇ ಗಂಟಲಿನ ದ್ರವ ಪರೀಕ್ಷೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ಸಹ ನೀಡಲಾಗಿದೆ. ಪ್ರಯೋಗಾಲಯ ಕಾರ್ಯಾರಂಭಗೊಂಡ ನಂತರ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಸಿದ್ಧರಾಗಿದ್ದಾರೆ.
ಲ್ಯಾಬ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಇತ್ತೀಚೆಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿ, ನಿಯಮಾನುಸಾರ ಕಾಮಗಾರಿಯನ್ನ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.