ರಾಯಚೂರು: ಮದುವೆ ವಿಚಾರಕ್ಕೆ ವಯಸ್ಸಾದ ತಂದೆಯನ್ನು ಮಗ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ನಗರದ ಗಂಜ್ ಸರ್ಕಲ್ ಹತ್ತಿರವಿರುವ ಗೋ ಶಾಲೆಯ ಹಿಂದುಗಡೆ ಕಸದ ರಾಶಿಯ ಮಧ್ಯೆ ನಿವೃತ್ತ ಎಎಸ್ಐ ಕೊಲೆಯಾಗಿ ಪತ್ತೆಯಾಗಿರುವ ಘಟನೆ ನಿನ್ನೆ ನಡೆದಿದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಎಸ್ಐ ಬಸವರಾಜಪ್ಪ(75) ಪುತ್ರ ಜಗದೀಶ್ನಿಂದಲೇ ಹತ್ಯೆಯಾಗಿದ್ದಾರೆ. ಸರ್ಕಾರಿ ಕೆಲಸದಿಂದ ನಿವೃತ್ತರಾದ ಬಳಿಕ ಬಸವರಾಜಪ್ಪ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ವಾಸಿಸುತ್ತಿದ್ದರು. ಕೆಲ ದಿನಗಳ ಹಿಂದೆ ರಾಯಚೂರಿನಲ್ಲಿ ತನ್ನ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ದಿನ ಗೋ ಶಾಲೆಯ ಹಿಂದುಗಡೆ ಮದುವೆ ವಿಚಾರಕ್ಕೆ ತಂದೆ ಮಗನ ನಡುವೆ ಕಲಹ ಉಂಟಾಗಿದೆ.
ಇದನ್ನೂ ಓದಿ: ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಎನ್‌ಐಎ ತನಿಖೆಗೆ ಆಗ್ರಹಿಸಿದ ಅಣ್ಣಾಮಲೈ
ಈ ವೇಳೆ ಮಾತಿಗೆ ಮಾತು ಬೆಳೆದು ಇಬ್ಬರ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ, ಜಗದೀಶ್ ಸಿಮೆಂಟ್ ಉಂಡಿಯಿಂದ ಬಸವರಾಜಪ್ಪರ ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾನೆ. ಇದರಿಂದ ತೀವ್ರವಾಗಿ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.
ವಿಷಯ ತಿಳಿದು ಸ್ಥಳಕ್ಕೆ ಮಾರ್ಕೆಟ್ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಘಟನೆ ಬಗ್ಗೆ ಅನುಮಾನಗೊಂಡ ಪೊಲೀಸರು ಮೃತದೇಹವನ್ನು ರಿಮ್ಸ್ ಶವಾಗಾರಕ್ಕೆ ರವಾನಿಸಿ ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ಮಗನೇ ತಂದೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹತ್ಯೆ ಮಾಡಿದ ಮಗ ಜಗದೀಶ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ಮೊದಲಿಗೆ ವಿವಾಹದ ವಿಚಾರವಾಗಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಬಸವರಾಜಪ್ಪನ ಹಿರಿಯ ಪುತ್ರ ಶಿವರಾಜ್ ದೂರು ದಾಖಲಿಸಿದ್ದು, ಪೊಲೀಸರು ಮಂದಿನ ಕ್ರಮ ಕೈಗೊಂಡಿದ್ದಾರೆ.