ರಾಯಚೂರು: ಕೆ.ಜೆ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಸಮಯದಲ್ಲಿ ಪೊಲೀಸರು ಗೋಲಿಬಾರ್ ನಡೆಸುವ ಮೂಲಕ ದಿಟ್ಟ ಕ್ರಮ ಕೈಗೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದ ಡಿ.ಆರ್. ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಬಿಜೆಪಿ ಸೇರುತ್ತಾರೆ ಎನ್ನುವ ಕಾರಣಕ್ಕೆ ಈ ಗಲಭೆ ನಡೆದಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ಕಾಂಗ್ರೆಸ್ ತನ್ನ ಹುಳುಕು ಮುಚ್ಚಿಕೊಳ್ಳಲು ನವೀನ್ ಬಿಜೆಪಿ ಕಾರ್ಯಕರ್ತ ಎಂದು ಸುಳ್ಳು ಹೇಳುತ್ತಿದೆ ಎಂದರು. ಅಲ್ಲದೆ ಶಾಸಕ ಜಮೀರ್ ಅಹಮದ್ ಗೋಲಿಬಾರ್ನಲ್ಲಿ ಸತ್ತವರು ಮುಗ್ಧರು ಎಂದು ಹೇಳುತ್ತಿದ್ದು, ಮುಗ್ಧರು ಮಧ್ಯರಾತ್ರಿ ಹೊರಗೆ ಬರುತ್ತಾರಾ? ಗಲಭೆ ವೇಳೆ ಇರುತ್ತಾರಾ? ಎಂದು ಪ್ರಶ್ನಿಸಿದರು.
ಬರುವ ಮೂರು ವರ್ಷದ ಅವಧಿಗೆ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರೆ. ನಾನು ಸಿಎಂ ಆಕಾಂಕ್ಷಿಯಲ್ಲ. ನನಗೆ ಉಪಮುಖ್ಯಮಂತ್ರಿ ಸ್ಥಾನದಲ್ಲಿ ತೃಪ್ತಿಯಿದೆ. ನಾನು ನನ್ನ ಇಲಾಖೆಯ ಕೆಲಸಕ್ಕೆ ದೆಹಲಿ ತೆರಳಿದ್ದೆ. ಆದ್ರೆ ಅದಕ್ಕೆ ರೆಕ್ಕೆಪುಕ್ಕ ನೀಡಿ ಕಾಗೆ ಹಾರಿಸಲಾಗಿದೆ ಎಂದರು.
ಕೊರೊನಾ ಸೋಂಕಿನಿಂದ ರಾಜ್ಯದ ಬೇರೆ ಇಲಾಖೆಗಳಂತೆ ಸಾರಿಗೆ ಇಲಾಖೆಗೆ ಅಂದಾಜು 2,760 ಕೋಟಿ ರೂ. ನಷ್ಟವುಂಟಾಗಿದೆ. ಆದರೂ ಸಾರ್ವಜನಿಕರ ಸೇವೆಗೆ ಬಸ್ಗಳನ್ನು ಓಡಿಸಲಾಗುತ್ತಿದೆ. ಸಾರಿಗೆ ಇಲಾಖೆಯ ನಾಲ್ಕು ನಿಗಮದಲ್ಲಿ ಪ್ರತಿನಿತ್ಯ ಒಂದು ಕೋಟಿ ಜನ ಸಂಚರಿಸುತ್ತಿದ್ದರು. ಕೋವಿಡ್ ಭೀತಿಯಿಂದ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಆರಂಭಿಸಲಾಗಿದ್ದರೂ ಕೇವಲ 31 ಲಕ್ಷ ಜನರು ಮಾತ್ರ ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ಇನ್ನುಳಿದ 69 ಲಕ್ಷ ಜನ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು.
ಇಲಾಖೆಯಲ್ಲಿನ 1.30 ಲಕ್ಷ ಸಿಬ್ಬಂದಿಗೆ ಮಾಸಿಕ 326 ಕೋಟಿ ರೂ. ವೇತನ ಪಾವತಿಸಬೇಕು. ಆರ್ಥಿಕ ಸಂಕಷ್ಟ ಎದುರಾಗಿದ್ದರಿಂದ 6 ತಿಂಗಳ ಸಂಬಳ ಪಾವತಿಗೆ ನೆರವು ನೀಡುವಂತೆ ಸಿಎಂ ಬಳಿ ಮನವಿ ಮಾಡಲಾಗಿತ್ತು. 2 ತಿಂಗಳು ಸರ್ಕಾರ ಖಜಾನೆಯಿಂದ ಸಂಬಳ ಪಾವತಿಸಲಾಗಿದ್ದು, 4 ತಿಂಗಳ ಸಂಬಳವನ್ನು ಸರ್ಕಾರ ಶೇ.75ರಷ್ಟು ಹಾಗೂ ಇಲಾಖೆ ಶೇ.25ರಷ್ಟು ಭರಿಸಿ ನೀಡಲಾಗುತ್ತಿದೆ.
ಬೇರೆ ರಾಜ್ಯಗಳಲ್ಲಿ ಸಂಬಳ ಕಡಿತ ಮಾಡಿದರೂ ನಮ್ಮ ರಾಜ್ಯದಲ್ಲಿ ಯಾವುದೇ ಸರ್ಕಾರಿ ನೌಕರರ ಸಂಬಳ ಕಡಿತ ಮಾಡಿಲ್ಲ. ಖಾಸಗಿಯವರಿಗಿಂತ ವೇಗವಾಗಿ ಕೊರಿಯರ್ ಸರ್ವಿಸ್ ವ್ಯವಸ್ಥೆಯನ್ನು ಇಲಾಖೆಯಿಂದ ಮಾಡಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ವಿದೇಶದಲ್ಲಿರುವಂತೆ ಬಸ್‌ಗಳಲ್ಲಿ ಸೈಕಲ್ ತೆಗೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗುತ್ತಿದ್ದು, ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಇಲಾಖೆಯಲ್ಲಿ ನಷ್ಟ ಕಡಿಮೆ ಮಾಡಲು ಹೊಸ ವ್ಯವಸ್ಥೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನ ನಿರ್ಮಾಣ ಪರಿಶೀಲನೆ:
ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯ ಕೇಳಿ ಬಂದಿವೆ. ಭಾವನಾತ್ಮಕ ಸಂಬಂಧವಿರುವ ಪ್ರಸ್ತುತ ಸ್ಥಳದಲ್ಲಿಯೇ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಜಿಲ್ಲಾಡಳಿತ ಭವನ ಕಟ್ಟಡವನ್ನು ಬೇರೆ ಇಲಾಖೆಗಳಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.