ರಾಯಚೂರು: ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಗ್ರಂಥಾಲಯ ಹಾಗೂ ಗ್ರಂಥ ಪಾಲಕರ ಶ್ರಮ ಗಣನೀಯವಾಗಿದೆ. ಇದಕ್ಕಾಗಿಯೇ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ (MLISc) ವಿಷಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪದವಿಯನ್ನು ಪಡೆಯುತ್ತಿದ್ದಾರೆ. ಆದ್ರೆ ಉದ್ಯೋಗವಿಲ್ಲದೇ ಯುವಕ ಯುವತಿಯರು ಅಲೆದಾಡುವಂತಾಗಿದೆ. ಕೂಡಲೇ ರಾಜ್ಯ ಸರಕಾರ, ಗ್ರಂಥ ಪಾಲಕರ ಹುದ್ದೆ ಭರ್ತಿಮಾಡಬೇಕೆಂದು ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಒತ್ತಾಯಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಳಗಿಮನಿ, ರಾಜ್ಯದ ಎಲ್ಲಾ ಶೈಕ್ಷಣಿಕ, ಸಂಶೋಧನಾ ಹಾಗೂ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕಳೆದ 30 ವರ್ಷಗಳಿಂದ ಖಾಲಿಯಿರುವ ಸಾವಿರಾರು ಗ್ರಂಥಪಾಲಕ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಇದರಿಂದ MLISc ಸೇರಿದಂತೆ ಗ್ರಂಥಪಾಲಕರ ಕೋರ್ಸಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಹಾಗೂ ಗ್ರಂಥಪಾಲಕ ಕೋರ್ಸ್ ಮುಚ್ಚುವ ಹಂತಕ್ಕೆ ಬಂದು ತಲುಪಿದೆ ಎಂದರು.
ಮತ್ತೊಂದೆಡೆ, ಸರ್ಕಾರಿ ಗ್ರಂಥಾಲಯಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, 6 ಸಾವಿರಕ್ಕೂ ಹೆಚ್ಚು ಹುದ್ದೆಗಳು ರಾಜ್ಯದಲ್ಲಿ ಖಾಲಿಯಿವೆ. ಕೂಡಲೇ ಎಲ್ಲ ಇಲಾಖೆಯಡಿ ಸ್ಥಾಪಿಸಲ್ಪಟ್ಟ ಗ್ರಂಥಾಲಯಗಳ ಗ್ರಂಥಪಾಲಕರ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕು. ಜೊತೆಗೆ ಗ್ರಂಥಾಲಯಗಳ ಸುಧಾರಣೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಹಾಗೂ ಇತರೆ ಬೇಡಿಕೆಯಿಟ್ಟುಕೊಂಡು ನ.16 ರಂದು ಜಿಲ್ಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (DYFI), ಕರ್ನಾಟಕ ರಾಜ್ಯ ಗ್ರಂಥ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವೀಧರರ ಸಂಘ ( KSLISGA) ಹಾಗೂ ವಿದ್ಯಾರ್ಥಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಮಾಡುತ್ತೇವೆಂದು ತಿಳಿಸಿದರು.