ರಾಯಚೂರು: ಪ್ರಧಾನಮಂತ್ರಿ ವಿಪತ್ತು ನಿಧಿಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಒಂದು ದಿನದ ವೇತನವನ್ನ ನೀಡಿದ್ದಾರೆಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ ವಿವಿಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ 18.29 ಲಕ್ಷ ರೂಪಾಯಿಯನ್ನ ಚೆಕ್ ಮೂಲಕ ನೀಡಿದ್ದಾರೆ. ಅದನ್ನು ಪಿಎಂ ವಿಪತ್ತು ನಿಧಿಗೆ ತಲುಪಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುವುದರಿಂದ ನೀರು ಲಭ್ಯವಿದೆ. ನಾರಾಯಣಪುರ ಬಲದಂಡೆ ನಾಲೆ ಹಾಗೂ ತುಂಗಭದ್ರ ಎಡದಂಡೆ ನಾಲೆಗಳ ಮೂಲಕ ರೈತರಿಗೆ ಅಗತ್ಯವಾದ ನೀರನ್ನು ಒದಗಿಸಲಾಗುವುದು. ಇದಕ್ಕಾಗಿ ನಾರಾಯಣಪುರ ಬಲದಂಡೆ ನಾಲಾ ಯೋಜನೆ ಆಧುನೀಕರಣ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎನ್ನುವ ದೂರು ಬಂದಿದೆ. ಈ ಬಗ್ಗೆ ಪರಿಶೀಲಿಸಿ, ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ತುಂಗಭದ್ರಾ ಎಡದಂಡೆ ನಾಲೆಯಿಂದ ಅಕ್ರಮವಾಗಿ ನೀರು ತೆಗೆದುಕೊಳ್ಳುತ್ತಿರುವ ಪರಿಣಾಮ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಅನ್ನೋ ದೂರು ಬಂದಿದೆ. ಇದನ್ನು ಸಹ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ರು.