ರಾಯಚೂರು : ರಾಜ್ಯಕ್ಕೆ ಶೇ.40ರಷ್ಟು ವಿದ್ಯುತ್ ಉತ್ಪಾದಿಸುವ ಮೂಲಕ ನಮಗೆ ಬೆಳಕು ನೀಡುವ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಚಿಮಣಿಯ ಮೂಲಕ ಹೆಚ್ಚಿನ ಮಟ್ಟದಲ್ಲಿ ಹಾರೂಬೂದಿ ಹೊರ ಬರುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು ತಾಲೂಕಿನ ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ದಿನದಿಂದ ದಿನಕ್ಕೆ ಹಾರೂಬೂದಿ ಪ್ರಮಾಣ ಹೆಚ್ಚಾಗುತ್ತಿದ್ದು, ಇದರಿಂದ ಶಕ್ತಿನಗರದ ಸುತ್ತಮುತ್ತಲಿರುವ ಯಾದ್ಲಾಪುರ, ಕಡ್ಲೂರು, ದೇವಸೂಗೂರು ಗ್ರಾಮ ಸೇರಿದಂತೆ ಹಲವು ಗ್ರಾಮಗಳ ಜನರು ನಾನಾ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೇ ಅಸ್ತಮಾ, ಕ್ಯಾನ್ಸರ್, ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದರ ಮಧ್ಯೆ ಮತ್ತೆ ಆರ್‌ಟಿಪಿಎಸ್‌ನಿಂದ ಹಾರೂಬೂದಿ ವಿಪರೀತವಾಗಿ ಬರುತ್ತಿರುವುದು ಗ್ರಾಮಸ್ಥರಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ.
ಆರ್‌ಟಿಪಿಎಸ್‌ನಿಂದ ಪರಿಸರ ಹಾಗೂ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದರೂ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ. ಇತ್ತ ಆರ್‌ಟಿಪಿಎಸ್ ಮಂಡಳಿ ತನ್ನ ನಿಯಮವನ್ನ ಗಾಳಿಗೆ ತೂರಿ, ಗಾಳಿಯಲ್ಲಿ ಹಾರೂಬೂದಿಯನ್ನ ಬಿಡುವ ಮೂಲಕ ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರ ಸ್ಥಳೀಯರಿಗೆ ಶಾಪವಾಗಿ ಪರಿಣಮಿಸಿದೆ. ಇನ್ನಾದರೂ ಕೂಡ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ.