ರಾಯಚೂರು: ಜಿಲ್ಲೆಯಲ್ಲಿ ಹೊಸದಾಗಿ ಮಹಿಳಾ ಕಾಲೇಜು ಉದ್ಘಾಟನೆಗೆ ರೆಡಿಯಾಗಿದೆ. ಆದರೆ ಇದರಲ್ಲಿ ತರಗತಿ ಕೊಠಡಿಗಳನ್ನು ಹೊರತುಪಡಿಸಿ ಮೂಲಭೂತ ಸೌಲಭ್ಯಗಳಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಈ ಕಾಲೇಜಿನಲ್ಲಿ ಪ್ರಸುತ್ತವಾಗಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ 301 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಮಹಿಳಾ ಕಾಲೇಜು ಪ್ರಾರಂಭದಿಂದ ಸರ್ಕಾರ ಶಾಶ್ವತವಾದ ನೆಲೆ ಕಲ್ಪಿಸಿಲ್ಲ. ತಾತ್ಕಾಲಿಕವಾಗಿ ನಗರದ ಕ್ರಾಫ್ಟ್ ಬಳಿಯ ಸರ್ಕಾರಿ ಪಿಯು ಕಾಲೇಜಿನ ಕೊಠಡಿಗಳಲ್ಲಿ ನಡೆಸಲಾಗುತ್ತಿದೆ.
2016-2017ನೇ ಸಾಲಿನ ವಿಶೇಷ ಅಭಿವೃದ್ಧಿ ಅನುದಾನ ಯೋಜನೆಯಡಿ ಕೆ.ಇ.ಬಿ. ಕಾಲೋನಿಯಲ್ಲಿ 20 ಗುಂಟೆಯ ಜಾಗದಲ್ಲಿ ಹೊಸದಾಗಿ 5 ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಯಾವುದೇ ಕನಿಷ್ಠ ಸೌಲಭ್ಯ ಕೂಡ ಕಲ್ಪಿಸಿಲ್ಲ. ಈ ಕಾಲೇಜನ್ನು ಇಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಅವರು ಉದ್ಘಾಟನೆ ಮಾಡಲಿದ್ದಾರೆ.
ಕಾಲೇಜು ಆದ ಮೇಲೆ ಕನಿಷ್ಠ ವಿದ್ಯಾರ್ಥಿನಿಯರಿಗೆ ಕಲಿಕೆಗೆ ಅಗತ್ಯವಿರುವ ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ, ಸುರಕ್ಷತೆ ದೃಷ್ಠಿಯಿಂದ ಶಾಲಾ ಕಾಂಪೌಂಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರೆ ಮೂಲಸೌಕರ್ಯಗಳು ಕಲ್ಪಿಸಬೇಕು. ಜೊತೆಗೆ ಬೋಧಕ ವೃಂದಕ್ಕೆ ಕೊಠಡಿ, ಪ್ರಾಂಶುಪಾಲರ ಕಚೇರಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಿಲನಕ್ಷೆ ರೂಪಿಸಿ ಕಾಲೇಜು ಪ್ರಾರಂಭಿಸಬೇಕು. ಆದರೆ ಇದೀಗ ಕನಿಷ್ಠ ಸೌಲಭ್ಯವಿಲ್ಲದ ಕಾಲೇಜಿನ 5 ತರಗತಿ ಕೊಠಡಿಗಳನ್ನ ಸಚಿವರು ಉದ್ಘಾಟನೆ ಮಾಡಲಿದ್ದು, ಈ ಬಗ್ಗೆ ಸಚಿವರ ಗಮನಕ್ಕೆ ತರುವುದಾಗಿ ಕಾಲೇಜು ಆಡಳಿತ ಅಧಿಕಾರಿಗಳು, ಬೋಧಕ ವೃಂದ ತಿಳಿಸಿದೆ.