ರಾಯಚೂರು: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಇಂದು ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನೆಲೆ ಜಿಲ್ಲೆಯಲ್ಲಿ 17 ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಬಂದ್ಗೆ ಬೆಂಬಲ ವ್ಯಕ್ತಪಡಿಸಿದವು.
ಬಂದ್ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳ ಸದಸ್ಯರು ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ, ರಾಜ್ಯ ಸರ್ಕಾರ ಸತ್ತು ಹೋಗಿದೆ ಎಂದು ಶ್ರದ್ಧಾಂಜಲಿ ಅರ್ಪಿಸುವ ಜೊತೆಗೆ ಸಮಾಧಿ ಕಟ್ಟಲು ಇಟ್ಟಿಗೆಗಳನ್ನು ತಲೆ ಮೇಲೆ ಹೊತ್ತುಕೊಂಡು ಅರೆಬೆತ್ತಲೆ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಕೂಡಲೇ ಮರಾಠ ಅಭಿವೃದ್ಧಿ ನಿಗಮ ರದ್ದುಗೊಳಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಇದೇ ವೇಳೆ ಪ್ರತಿಭಟನಾಕಾರರು ಎಚ್ಚರಿಸಿದರು. ಬಂದ್ ಹಿನ್ನೆಲೆ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇನ್ನು ಜಿಲ್ಲೆಯಾದ್ಯಂತ ಜನಜೀವನ, ಸಾರಿಗೆ ಬಸ್‌ಗಳು, ಆಟೋಗಳು, ಖಾಸಗಿ ವಾಹನಗಳು ಸಂಚರಿಸುತ್ತಿದ್ದ ದೃಶ್ಯ ಕಂಡುಬಂತು. ಅಂಗಡಿ ಮುಂಗಟ್ಟುಗಳು ಸಹ ಎಂದಿನಂತೆ ತೆರೆದಿದ್ದು, ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.