ರಾಯಚೂರು: ಕೊರೊನಾ ಸೋಂಕಿನ ಭೀತಿ ನಡುವೆ ಇಂದಿನಿಂದ ಜಿಲ್ಲೆಯ ಕಾಲೇಜುಗಳನ್ನು ಪುನಾರಂಭಿಸಲಾಗಿದೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಕಾಲೇಜಿಗೆ ಬಂದಿದ್ದ ಒಬ್ಬಳೇ ಒಬ್ಬ ವಿದ್ಯಾರ್ಥಿನಿಗೆ ಉಪನ್ಯಾಸಕರು ತರಗತಿ ನಡೆಸಿದ್ದಾರೆ.
ಕೊರೊನಾ ಭೀತಿ ಹಿನ್ನೆಲೆ ಸರ್ಕಾರದ ಆದೇಶದಂತೆ ತರಗತಿ ಕೊಠಡಿಗಳನ್ನ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗಿದೆ. ತರಗತಿ ಕೊನೆಯಲ್ಲಿ ಚಿಕ್ಕ ಬೆಂಚ್ಗಳನ್ನು ಇಡಲಾಗಿದೆ. ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಪಾಲಕರ ಒಪ್ಪಿಗೆ ಪತ್ರ, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವುದು, ಕೋವಿಡ್ ಪರೀಕ್ಷೆ ಮಾಡಿಕೊಂಡು ಪತ್ರವನ್ನ ತರಬೇಕೆಂಬ ನಿಯಮ ವಿಧಿಸಲಾಗಿದೆ.
ಮುಂದಿನ ಎರಡು-ಮೂರು ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಕಾಲೇಜಿನ ಪ್ರಾಂಶುಪಾಲ ಮಲ್ಲನಗೌಡ ಹೇಳಿದ್ದಾರೆ.