IPL Mega Auction: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ (IPL Mega Auction 2025) ದಿನಗಣನೆ ಆರಂಭವಾಗಿದೆ. ನ.24 ಮತ್ತು 25ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಬಿಸಿಸಿಐ (BCCI)ನ ಹೊಸ ರಿಟೇನ್ ನಿಯಮದಿಂದಾಗಿ ಬಹುತೇಕ ತಂಡಗಳಲ್ಲಿ ಈ ಬಾರಿ ಹೊಸ ಆಟಗಾರರನ್ನು ನೋಡಬಹುದು.
ಅದರಲ್ಲೂ ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಯಾವ ಆಟಗಾರ ಯಾರ ತಂಡ ಸೇರಿಕೊಳ್ಳುತ್ತಾರೆ ಎಂಬ ಕುತೂಹಲವಿದೆ. ಈ ಪೈಕಿ ಪ್ರಮುಖ ಹತ್ತು ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ಕಾದು ಕುಳಿತಿವೆ.
10. ರಚೀನ್ ರವೀಂದ್ರ: ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಿಂಚಿರುವ ರಚಿನ್ ರವೀಂದ್ರ (Rachin Ravindra) ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಿದ್ದ ಇವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ. ಬಲಗೈ ಬ್ಯಾಟರ್ ಇದುವರೆಗೂ ಐಪಿಎಲ್ (IPL)ನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಿದ್ದು 222 ರನ್ ಗಳಿಸಿದ್ದಾರೆ. 61 ಹೈಸ್ಕೋರ್ ಆಗಿದೆ. ಹರಾಜಿಗೆ ಬಂದಿರುವ ರಚಿನ್ ಮೂಲ ಬೆಲೆ 2 ಕೋಟಿ ರೂ.
9. ಜೋಸ್ ಬಟ್ಲರ್: ರಾಜಸ್ಥಾನ್ ರಾಯಲ್ಸ್ ತಂಡ ಜೋಸ್ ಬಟ್ಲರ್ ಅವರನ್ನು ಹರಾಜಿಗೆ ಬಿಟ್ಟಿದೆ. ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿರುವ ಬಟ್ಲರ್ ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.
8. ಇಶನ್ ಕಿಶನ್: ಜಾರ್ಖಂಡ್ ವಿಕೆಟ್ ಕೀಪರ್ ಮತ್ತು ಬ್ಯಾಟರ್ 2022ರ ಐಪಿಎಲ್ ಹರಾಜಿನಲ್ಲಿ ಹೆಚ್ಚಿನ ಮೊತ್ತ ಪಡೆದಿದ್ದ ಎರಡನೇ ಭಾರತೀಯ ಆಟಗಾರ. ಇವರನ್ನು ಮುಂಬೈ ಇಂಡಿಯನ್ಸ್ ₹15.25 ಕೋಟಿಗೆ ಖರೀದಿಸಿತ್ತು. ಆದ್ರೆ ಈ ಬಾರಿ ಮುಂಬೈ ಇಶನ್ ಕಿಶನ್ ಅವರನ್ನು ಕೈ ಬಿಟ್ಟಿದೆ. ಇವರ ಮೂಲ ಬೆಲೆ ₹2 ಕೋಟಿ.
7. ಮೊಹ್ಮದ್ ಶಮಿ: 34 ವರ್ಷದ ವೇಗದ ಬೌಲರ್ ಮೊಹ್ಮದ್ ಶಮಿ ಗಾಯದ ಸಮಸ್ಯೆಗೆ ತುತ್ತಾಗಿ ಇದೀಗ ಚೇತರಿಸಿಕೊಂಡಿದ್ದಾರೆ. ಆದರೆ ಫಿಟ್ನೆಸ್ ಸಮಸ್ಯೆಯಾಗುಳಿದಿದೆ. ಈ ಬಾರಿ ಗುಜರಾತ್ ಟೈಟಾನ್ಸ್ ಕೂಡ ತಂಡದಿಂದ ಕೈಬಿಟ್ಟಿದೆ. ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಶಮಿ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಮೂಲ ಬೆಲೆ ₹2 ಕೋಟಿ.
6. ಅರ್ಷದೀಪ್ ಸಿಂಗ್: ಪಂಜಾಬ್ ಕಿಂಗ್ಸ್ ಎಡಗೈ ಬೌಲರ್ ಅವರನ್ನು ಪಂಜಾಬ್ ಕಿಂಗ್ಸ್ ಕೈಬಿಟ್ಟಿದೆ. ಬುಮ್ರಾ ನಂತರ ಟಿ20ಯಲ್ಲಿ ಎರಡನೇ ಪ್ರಮುಖ ಬೌಲರ್ ಎನಿಸಿಕೊಂಡಿರುವ ಅರ್ಷದೀಪ್ ಡೆತ್ ಓವರ್ನಲ್ಲಿ ಭರ್ಜರಿ ಪ್ರದರ್ಶನ ತೋರುತ್ತಾರೆ. ಇವರ ಮೂಲ ಬೆಲೆ ₹2 ಕೋಟಿ.
5. ಯುಜ್ವೇಂದ್ರ ಚಹಾಲ್: ಭಾರತದ ಸ್ಟಾರ್ ಸ್ಪಿನ್ನರ್ ಚಹಾಲ್ ತಮ್ಮ ಸ್ಪಿನ್ ಬೌಲಿಂಗ್ನಿಂದಲೇ ಎದುರಾಳಿ ತಂಡಗಳಿಗೆ ನಡುಕ ಹುಟ್ಟಿಸುತ್ತಾರೆ. ಕಳೆದ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಚಹಾಲ್ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಮೂಲ ಬೆಲೆ ₹2 ಕೋಟಿ.
4. ಮಿಚೆಲ್ ಸ್ಟಾರ್ಕ್: ಕಳೆದ ಐಪಿಎಲ್ ಹರಾಜಿನಲ್ಲಿ 24.50 ಕೋಟಿ ಬಿಕರಿಯಾಗಿದ್ದ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಅವರನ್ನು ಕೆಕೆಆರ್ ಈ ಬಾರಿ ತಂಡದಲ್ಲಿ ಉಳಿಸಿಕೊಂಡಿಲ್ಲ. ಹಾಗಾಗಿ ಸ್ಟಾರ್ಕ್ ಈ ಬಾರಿಯೂ ಹೆಚ್ಚಿನ ಮೊತ್ತಕ್ಕೆ ಬಿಕರಿ ಆಗಲಿದ್ದಾರೆ. ಇವರ ಮೂಲ ಬೆಲೆ ₹2 ಕೋಟಿ.
3. ಕೆ.ಎಲ್ ರಾಹುಲ್: ಈ ಬಾರಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. 32 ವರ್ಷದ ಇವರು ಐಪಿಎಲ್‌ನಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ವಿಕೆಟ್ ಕೀಪರ್ ಮತ್ತು ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವ ರಾಹುಲ್ ಮೂಲ ಬೆಲೆ ₹2 ಕೋಟಿ.
2. ಶ್ರೇಯಸ್ ಅಯ್ಯರ್: ಅಯ್ಯರ್ ಕೂಡ ಹೆಚ್ಚಿನ ಮೊತ್ತಕ್ಕೆ ಬಿಕರಿ ಆಗುವ ಸಾಧ್ಯತೆ ಇದೆ ಎಂದು ವರದಿಗಳಾಗುತ್ತಿವೆ. ಕಳೆದ ಆವೃತ್ತಿಯಲ್ಲಿ KKR ನಾಯಕತ್ವ ವಹಿಸಿದ್ದ ಅಯ್ಯರ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾಗಿದ್ದರು.
1. ರಿಷಭ್ ಪಂತ್: ಈ ಬಾರಿ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರುವ ಆಟಗಾರ ಎಂದರೆ ಅದು ರಿಷಭ್ ಪಂತ್. ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಹಲವಾರು ಫ್ರಾಂಚೈಸಿಗಳು ಪಂತ್ ಅವರನ್ನು ಖರೀದಿಸಲು ಕಾದು ಕುಳಿತಿವೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಪಂತ್ ನಾಯಕನಾಗಿಯೂ ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. RCB, PBKS, CSK ನಂತಹ ಫ್ರಾಂಚೈಸಿಗಳಿಗೆ ನಾಯಕತ್ವದ ಸಮಸ್ಯೆ ಇದ್ದು ಪಂತ್ ಇದಕ್ಕೆ ಸೂಕ್ತವಾಗಿದ್ದಾರೆ. ಪಂತ್ 20 ಕೋಟಿಗೂ ಹೆಚ್ಚಿನ ಮೊತ್ತ ಪಡೆಯುವ ಸಾಧ್ಯತೆ ಇದೆ. ಸದ್ಯ ಇವರ ಮೂಲ ಬೆಲೆ ₹2 ಕೋಟಿ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ vs ಪ್ಯಾಟ್ ಕಮಿನ್ಸ್: ಯಾರು ಬೆಸ್ಟ್?: ಹೀಗಿದೆ ಕಳೆದ 40 ಟೆಸ್ಟ್ ಪಂದ್ಯಗಳ ಸಾಧನೆ