ಚೆನ್ನೈ(ತಮಿಳುನಾಡು): 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ತಮಿಳು ಚಿತ್ರರಂಗದ ಪ್ರಸಿದ್ಧ ನಟ ಡೆಲ್ಲಿ ಗಣೇಶ್ ಶನಿವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆ 80 ವರ್ಷ ವಯಸ್ಸಾಗಿತ್ತು.
ಡೆಲ್ಲಿ ಗಣೇಶ್ ಸಾವಿನ ಬಗ್ಗೆ ಪುತ್ರ ಮಹದೇವನ್ ಸಾಮಾಜಿಕ ಜಾಲತಾಣದಲ್ಲಿ, "ನಮ್ಮ ತಂದೆ ಡೆಲ್ಲಿ ಗಣೇಶ್ ಅವರು ನವೆಂಬರ್ 9ರಂದು ರಾತ್ರಿ 11 ಗಂಟೆಗೆ ನಿಧನರಾದರು ಎಂದು ಹೇಳಲು ವಿಷಾಧಿಸುತ್ತೇನೆ" ಎಂದು ತಿಳಿಸಿದ್ದಾರೆ.
ಪಾರ್ಥಿವ ಶರೀರವನ್ನು ಚೆನ್ನೈನ ರಾಂಪುರದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಅಂತ್ಯಕ್ರಿಯೆ ನ.11ರಂದು ಬೆಳಗ್ಗೆ ನಡೆಯಲಿದೆ.
ದೆಹಲಿಯ ದಕ್ಷಿಣ ಭಾರತ್ ನಾಟಕ ಸಭಾದಲ್ಲಿ ಸಕ್ರಿಯರಾಗಿದ್ದ ಗಣೇಶನ್, ಭಾರತೀಯ ವಾಯುಸೇನೆ ಹುದ್ದೆ ತೊರೆದು ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1976ರಲ್ಲಿ ನಿರ್ದೇಶಕ ಬಾಲಚಂದರ್ ಅವರ 'ಪತ್ತಿನ ಪ್ರವೇಶಂ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಬಾಲಚಂದರ್ ಅವರೇ ಡೆಲ್ಲಿ ಗಣೇಶ್ ಎಂದು ಸ್ಟೇಜ್ ನೇಮ್ ನೀಡಿದ್ದರು.
ಡೆಲ್ಲಿ ಗಣೇಶ್ ನಾಲ್ಕು ದಶಕಗಳ ತಮ್ಮ ಸಿನಿಪಯಣದಲ್ಲಿ ತಮಿಳು ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತಮಿಳು ಚಿತ್ರರಂಗದ ಅತ್ಯಂತ ಪ್ರೀತಿಯ ನಟರಲ್ಲಿ ಒಬ್ಬರಾದ ಇವರು ಹಾಸ್ಯನಟ, ಖಳನಾಯಕ ಸೇರಿದಂತೆ ಹಲವು ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದರು. ಯಾವುದೇ ರೀತಿಯ ಪಾತ್ರಗಳಾಗಿದ್ದರೂ ಅವುಗಳಿಗೆ ಪರಕಾಯ ಪ್ರವೇಶ ಮಾಡುವ ಮೂಲಕ ಹೆಸರುವಾಸಿಯಾಗಿದ್ದರು.
ಈ ನಲವತ್ತು ವರ್ಷಗಳಲ್ಲಿ ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ತಮಿಳು ಚಿತ್ರರಂಗದ ಹಲವು ಶ್ರೇಷ್ಠ ತಾರೆಗಳೊಂದಿಗೆ ತೆರೆ ಹಂಚಿಕೊಂಡಿದ್ದರು. 1981ರಲ್ಲಿ ಗಣೇಶ್ 'ಎಂಗಮ್ಮ ಮಹಾರಾಣಿ' ಸಿನಿಮಾದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದರು. ಆದರೆ ಪೋಷಕ ನಟನಾಗಿ ಹೆಚ್ಚು ಅಭಿಮಾನಿಗಳನ್ನು ಗಳಿಸಿದ್ದಾರೆ.
'ಸಿಂಧು ಭೈರವಿ' (1985), 'ನಾಯಕನ್' (1987), 'ಮೈಕೆಲ್ ಮದನ ಕಾಮ ರಾಜನ್' (1990), 'ಆಹಾ..!' (1997) ಮತ್ತು 'ತೆನಾಲಿ' (2000) ಸಿನಿಮಾಗಳಲ್ಲಿ ಇವರ ಪಾತ್ರಗಳು ವ್ಯಾಪಕ ಮೆಚ್ಚುಗೆ ಗಳಿಸಿದ್ದವು.
ತಮಿಳು ಚಿತ್ರರಂಗಕ್ಕೆ ದೆಹಲಿ ಗಣೇಶ್ ನೀಡಿರುವ ಕೊಡುಗೆಯನ್ನು ಗುರುತಿಸಿ ಹಲವು ಪ್ರಶಸ್ತಿಗಳು ಬಂದಿವೆ. 1979ರ 'ಬಾಸಿ' ಚಿತ್ರಕ್ಕಾಗಿ ತಮಿಳುನಾಡು ರಾಜ್ಯ ಸರ್ಕಾರ ಅತ್ಯುತ್ತಮ ನಟ ಪ್ರಶಸ್ತಿ ನೀಡಿದೆ. ಅಂತೆಯೇ, ಅವರ ಕಲಾಸೇವೆಯನ್ನು ಗುರುತಿಸಿ ಅಂದಿನ ಮುಖ್ಯಮಂತ್ರಿ ಜೆ.ಜಯಲಲಿತಾ 1994ರಲ್ಲಿ ಪ್ರತಿಷ್ಠಿತ ಕಲೈಮಾಮಣಿ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇತ್ತೀಚೆಗೆ ನಡೆದ ನಟರ ಸಂಘದ 68ನೇ ಮಹಾಸಭೆಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
1944ರ ಆಗಸ್ಟ್ 1ರಂದು ತಿರುನಲ್ವೇಲಿ ಜಿಲ್ಲೆಯಲ್ಲಿ ಜನಿಸಿದ ಇವರು ಮೂರು ತಿಂಗಳ ಹಿಂದೆ 80ನೇ ವರ್ಷಕ್ಕೆ ಕಾಲಿಟ್ಟಿದ್ದರು. ಇದಕ್ಕಾಗಿ ಅವರ ಕುಟುಂಬದವರು ಶತಭಿಷೇಕ ಕಾರ್ಯಕ್ರಮ ಏರ್ಪಡಿಸಿದ್ದರು. ಇತ್ತೀಚೆಗೆ ಬಿಡುಗಡೆಯಾದ ಅರನ್ಮನೈ 4 ಮತ್ತು ಇಂಡಿಯನ್ 2 ಚಿತ್ರಗಳಲ್ಲಿ ದೆಹಲಿ ಗಣೇಶ್ ನಟಿಸಿದ್ದರು ಎಂಬುದು ಗಮನಾರ್ಹ.
ಇದನ್ನೂ ಓದಿ: ಮೊದಲ ವಿಶ್ವಸುಂದರಿ ಕಿಕಿ ನಿಧನ: ಬಿಕಿನಿ ಧರಿಸಿ ಕಿರೀಟ ಮುಡಿಗೇರಿಸಿಕೊಂಡಿದ್ದ ಮೊದಲ ಮತ್ತು ಕೊನೆಯ ಚೆಲುವೆ ಈಕೆ