ರಾಯಚೂರು: ಜಿಲ್ಲೆಯ ಬಿಎಸ್ಎನ್ಎಲ್ ಕಚೇರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಎರಡು ತಿಂಗಳಿನಿಂದ ಕೆಲಸದಿಂದ ತೆಗೆದು ಹಾಕಲಾಗಿದೆ. ಕಳೆದ 7 ತಿಂಗಳಿಂದ ವೇತನವೂ ಸಿಗದೇ ಇರೋದರಿಂದ ಅವರೆಲ್ಲ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟೆಂಡರ್ ಮುಗಿದ ಕಾರಣ ಕೆಲಸದಿಂದ ತೆಗೆದುಹಾಕಿದ್ದು, ಕೊಪ್ಪಳ ಸೇರಿ ರಾಯಚೂರಿನ 49 ಒಟ್ಟು 160 ಸಿಬ್ಬಂದಿ ಬೀದಿಗೆ ಬಿದ್ದಿದ್ದಾರೆ. ಇತ್ತ ಕೆಲಸವೂ ಇಲ್ಲದೇ ಅತ್ತ 7 ತಿಂಗಳ ವೇತನವು ಇಲ್ಲದೇ ತೀರ ಸಂಕಷ್ಟ ಎದುರಾಗಿದ್ದು, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ ಹಾಗೂ ಇತರೆ ಖರ್ಚು ವೆಚ್ಚಕ್ಕೆ ಕೈಯಲ್ಲಿ ಕಾಸಿಲ್ಲದೇ ಸಂಕಷ್ಟ ಪರಿಸ್ಥಿತಿಯಲ್ಲಿದ್ದೇವೆ ಎಂದು ನೊಂದಿರುವ ಸಿಬ್ಬಂದಿ ದೂರುತ್ತಿದ್ದಾರೆ.
ಇವರ ಪರಿಸ್ಥಿತಿ ಹೀಗಾದರೆ ಬಿಎಸ್ಎನ್ಎಲ್ ಬಳಕೆದಾರರಿಗೂ ಸರ್ವಿಸ್ ಸಿಗದೇ ಸಿಮ್ ಬಳಕೆದಾರರಿಗೂ ಬಿಸಿ ತಟ್ಟಿದೆ. ಟವರ್ ಬಂದ್ ಅಗಿವೆ, ನೆಟ್ವರ್ಕ್ ಸಮಸ್ಯೆ, ಸಾರ್ವಜನಿಕರ ದೂರಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಬಿಎಸ್ಎನ್ಎಲ್ ಕಚೇರಿಯಲ್ಲಿ ಅರೆಕಾಲಿಕ ಸಿಬ್ಬಂದಿಯೇ ಆಧಾರವಾಗಿದ್ದ ಕಾರಣ ಈಗ ಅವರ ಅನುಪಸ್ಥಿತಿಯಲ್ಲಿ ಕಚೇರಿಯಿದ್ದರೂ ಕಾರ್ಯನಿರ್ವಹಣೆಯಿಲ್ಲದಂತಾಗಿದೆ.
ಪ್ರಸ್ತುತ ಅಂದಾಜು 30 ಸಿಬ್ಬಂದಿ ಮಾತ್ರ ಖಾಯಂ ನೌಕರರಿದ್ದು, ಕಚೇರಿಯಲ್ಲಿ ಕೆಲಸದ ಒತ್ತಡದ ಜೊತೆಗೆ ಸಾರ್ವಜನಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.