ರಾಯಚೂರು: ಸುರಾನ ಇಂಡಸ್ಟ್ರೀಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 155 ಖಾಯಂ ನೌಕರರ 41 ತಿಂಗಳ ಬಾಕಿ ವೇತನ ದೊರಕಿಸಿಕೊಡಲು ಜಿಲ್ಲಾಧಿಕಾರಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಅ. 22ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಸುರಾನ ಎಂಪ್ಲಾಯಿಸ್ ಯೂನಿಯನ್ ಮುಖಂಡ ಡಿ.ಎಸ್.ಶರಣಬಸವ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರಾನ ಕಾರ್ಖಾನೆಯ ಪ್ರಸ್ತುತ ಉತ್ಪಾದನೆ ಸ್ಥಗಿತಗೊಂಡಿದೆ. ಕಾರ್ಖಾನೆಯ 155 ಖಾಯಂ ನೌಕರರ ಕಳೆದ 41 ತಿಂಗಳ ವೇತನ ಬಾಕಿಯಿದ್ದು, ಈ ಕುರಿತು ಕಲಬುರಗಿ ಕಾರ್ಮಿಕ ಉಪಾಯುಕ್ತರ ಕಚೇರಿಯಲ್ಲಿ ದಾವೆ ಹಾಕಲಾಗಿತ್ತು. ಬಳಿಕ ಪ್ರಕರಣದ ವಿಚಾರಣೆ ನಡೆಸಿ 2018ರ ಡಿಸೆಂಬರ್ 20ರಂದು ಕಂಪನಿಯ ಮಾಲೀಕರು 30 ದಿನಗಳಲ್ಲಿ ಬಾಕಿ ವೇತನ ನೀಡಲು ಆದೇಶಿಸಲಾಗಿತ್ತು.
ಆದರೆ, ಸುರಾನ ಇಂಡಸ್ಟ್ರೀಸ್ ಆಡಳಿತ ಮಂಡಳಿ ಇದಕ್ಕೆ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿತ್ತು. ಈ ಕುರಿತು ಮತ್ತೆ ಕಲಬುರಗಿ ಕಾರ್ಮಿಕ ಉಪಯುಕ್ತರು ಗಮನಕ್ಕೆ ತಂದಾಗ 2019ರ ಜೂನ್ 4ರಂದು ಪುನಃ ಆದೇಶ ನೀಡಿದ್ದರು. ಬಾಕಿ ವೇತನ ವಸೂಲಾತಿಗೆ ಕ್ರಮ ಕೈಗೊಳ್ಳಲು ಆದೇಶಿಸಿ 16 ತಿಂಗಳು ಕಳೆದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ, ಅ. 22ರಂದು ಪ್ರತಿಭಟನೆ ನಡೆಸಲಾಗುವುದು ಎಂದರು.