ರಾಯಚೂರು: ದೇವದುರ್ಗದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನಗರದ ಎಸ್ಪಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ವೇದ ಮೂರ್ತಿ ಅವರಿಗೆ ದೂರವಾಣಿ ಮೂಲಕ ಅಹವಾಲು ಸಲ್ಲಿಸಿದರು.
ರಾಯಚೂರಿನ ಶಿವಮೂರ್ತಿ ಎಂಬುವರು ಕರೆ ಮಾಡಿ ರಾಯಚೂರಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗಿ ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದರು. ಇದಕ್ಕೆ ಎಸ್ಪಿ ಸ್ಪಂದಿಸಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದು ಈ ಕುರಿತು ಸಂಚಾರಿ ಪೊಲೀಸರಿಗೆ ತಿಳಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.
ಇನ್ನು ಕವಿತಾಳ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನಡೆದಿದ್ದು, ಡೆಮಾಲಿಶ್ನಿಂದ ತೀವ್ರ ಸಮಸ್ಯೆಯಾಗಿದೆ. ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ತಿಳಿಸದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮತ್ತೊಬ್ಬರು ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಇನ್ನು ತಾಯಿ-ಮಗಳು, ನಾವು ಹೊಸ ಮನೆ ನಿರ್ಮಾಣ ಮಾಡುತ್ತೇವೆ. ಆದ್ರೆ ನಮ್ಮ ಅತ್ತಿಗೆ ನಮ್ಮ ಮೇಲೆ ದೌರ್ಜನ್ಯ ನಡೆಸುತಿದ್ದಾರೆ ಎಂದು ದೂರಿದರು. ಜೊತೆಗೆ ನೀರಿನ ಸಮಸ್ಯೆ, ಚರಂಡಿ, ಸ್ವಚ್ಛತೆ ಹಾಗೂ ಇತರೆ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂಬ ದೂರುಗಳು ಬಂದವು.
ಈ ಎಲ್ಲಾ ಸಮಸ್ಯೆಗಳನ್ನು ಕೇಳಿ ದಂಗಾದ ಎಸ್ಪಿ, ಫೋನ್ ಕಟ್ ಮಾಡದೇ ಸೂಕ್ಷ್ಮವಾಗಿ ಆಲಿಸಿ ನಿಮ್ಮ ವ್ಯಾಪ್ತಿಯ ಪಿಡಿಒಗಳ ಜೊತೆ ಮಾತನಾಡಿ ಸಮಸ್ಯೆ ತಿಳಿಸುತ್ತೇನೆ ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು.