ಲಿಂಗಸುಗೂರು: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಹಬ್ಬದ ಶಾಂತಿಯುತ ಆಚರಣೆಗೆ ಸಂಬಂಧಿಸಿದಂತೆ ಗುರುವಾರ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಎಸ್ಪಿ ಎಸ್.ಎಸ್. ಹಳ್ಳೂರು ಮಾತನಾಡಿ, ವಕ್ಫ್ ಬೋರ್ಡ್ ನಿರ್ದೇಶನದಂತೆ ಈ ಬಾರಿ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ ಎಂದು ತಿಳಿಸಿದರು. ಮಸೀದಿ, ದರ್ಗಾ ಮತ್ತು ಮನೆಗಳಲ್ಲಿ ಆಯ್ದ ಕೇವಲ 50 ಜನರು ಮಾತ್ರ ಕೋವಿಡ್ ನಿಯಮ ಪಾಲಿಸಿ ಪ್ರಾರ್ಥನೆ ಸಲ್ಲಿಸಬಹುದು. ಈ ಸಂದರ್ಭ ಹಸ್ತ ಲಾಘವ, ಆಲಿಂಗನ ಮಾಡುವಂತಿಲ್ಲ. ಮಾಸ್ಕ್ ಧಾರಣೆ ಸ್ಯಾನಿಟೈಸರ್ ಬಳಕೆ ಕಡ್ಡಾಯ ಎಂದು ಹೇಳಿದರು.
ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ, ವಕ್ಫ್ ಜಿಲ್ಲಾ ಅಧ್ಯಕ್ಷ ಉಮರ್, ಧರ್ಮಗುರು ಸೈಯದ ಯುನೂಸ್ ಖಾಸ್ಮಿ, ಲಾಲಾ ಅಹ್ಮದಸಾಬ ಮಾತನಾಡಿ ಸರ್ಕಾರ ಕೊರೊನಾ ಹರಡದಂತೆ ಕೈಗೊಂಡ ಕಟ್ಟಳೆಗಳನ್ನು ನಾವೆಲ್ಲ ಪಾಲಿಸೋಣ. ಕೋಮು ಸೌಹಾರ್ದತೆ ಜೊತೆಗೆ ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸೋಣ ಎಂದು ಮನವಿ ಮಾಡಿದರು.