ಲಿಂಗಸುಗೂರು: ಸ್ನೇಹಿತನ ಮೊಬೈಲ್ ಸಂದೇಶದಿಂದ ಸಂಶಯಾಸ್ಪದ ಕಿರುಕುಳಕ್ಕೆ ಒಳಗಾಗಿ ಬಾವಿಗೆ ಬಿದ್ದು ಮೃತಳಾದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುರುಗುಂಟಾದ ಖಾಜಾಬೇಗಂ (30) ಮರಣೋತ್ತರ ಪರೀಕ್ಷೆ ವಿಳಂಬ ಮಾಡಿದ್ದನ್ನು ಖಂಡಿಸಿ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಖಾಜಾಬೇಗಂ ಮರಣೋತ್ತರ ಪರೀಕ್ಷೆ ನಡೆಸುವಲ್ಲಿ ಪೊಲೀಸ್, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳ ತಾತ್ಸಾರ ಮನೋಭಾವ ವಿರೋಧಿಸಿ ಮುಸ್ಲಿಂ ಸಮುದಾಯದ ಮುಖಂಡರ ನೇತೃತ್ವದಲ್ಲಿ ವಾಗ್ವಾದ, ಪ್ರತಿಭಟನೆ ನಡೆದು ರಣರಂಗವಾಗಿ ಪರಿಣಮಿಸಿತ್ತು. ಬುಧವಾರ ಸಂಜೆ ಗಂಡ ಮುಸ್ಲಿದ್ದೀನ್ ಹಾಗೂ ರಮೇಶ (ಎಗ್ ಫ್ರೈಡ್ ರೈಸ್ ವ್ಯಾಪಾರಿ) ಕಿರುಕುಳಕ್ಕೆ ಬಾವಿಗೆ ಬಿದ್ದು ಖಾಜಾಬೇಗಂ ಮೃತಪಟ್ಟಿದ್ದರು. ಸಂಜೆ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹ ತಂದಿದ್ದು, ಗುರುವಾರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆಗೆ ಪತ್ರ ಬರೆದುಕೊಂಡಿದ್ದರು.
ಒಂದು ಕಡೆ ಹಟ್ಟಿ ಪೊಲೀಸರ ವಿಳಂಬವೇ ಮರಣೋತ್ತರ ಪರೀಕ್ಷೆಗೆ ವಿಳಂಬ ಎಂದು ಆರೋಗ್ಯ ಇಲಾಖೆ ಆರೋಪ. ಇನ್ನೊಂದೆಡೆ ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲೂಕು ಆರೋಗ್ಯ ಇಲಾಖೆ ವೈದ್ಯರ ಮುಸುಕಿನ ಗುದ್ದಾಟದ ಆರೋಪಗಳು ಕೇಳಿ ಬಂದವು. ಈ ವಿಚಾರವಾಗಿ ಒಂದು ಹಂತದಲ್ಲಿ ಮುಖಂಡರು, ವೈದ್ಯರು ಹಾಗು ಪೊಲೀಸ್ ಸಿಬ್ಬಂದಿ ಮಧ್ಯೆ ವಾಗ್ವಾದ ನಡೆಯಿತು.
ಪ್ರತಿಭಟನೆಯ ಬಿಸಿ ಹೆಚ್ಚುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಜನರನ್ನು ಚದುರಿಸಿದರು. ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರ ಮಾಡಿದರು. ಮೃತಳ ಸಹೋದರ ಬಂದೇನವಾಜ ಮಾತನಾಡಿ, ಸಹೋದರಿ ಸಾವಿನ ದುಃಖಕ್ಕೆ ಮಿಡಿಯಬೇಕೋ, ಅಧಿಕಾರಿಗಳು ನಿಯಮ ಪಾಲಿಸಿ ಮೃತದೇಹ ನೀಡಲು ಅನುಸರಿಸಿದ ವಿಳಂಬ ಧೋರಣೆಗೆ ಕಣ್ಣೀರು ಸುರಿಸಬೇಕೋ ತಿಳಿಯದಾಗಿದೆ. ಅಧಿಕಾರಿಗಳ ಗೊಂದಲ ಕುಟುಂಬಸ್ಥರನ್ನು ಮತ್ತು ಮುಸ್ಲಿಂ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.