ರಾಯಚೂರು: ಮಸ್ಕಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕೊರೊನಾ ಸೋಂಕು ಹಿನ್ನೆಲೆ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಅವರ ಮನೆಯ ಬಳಿಯಿರುವ ಮತಗಟ್ಟೆ ಸಂಖ್ಯೆ 88, 89 ರಲ್ಲಿ ಕೇಂದ್ರವಿದ್ದು, ಮನೆಯ ಮಹಡಿಯಿಂದ ಮತದಾನ ಪ್ರಕ್ರಿಯೆಯನ್ನ ವೀಕ್ಷಿಸಿದ್ರು.
ಏ. 11 ರಂದು ಪ್ರತಾಪಗೌಡ ಪಾಟೀಲ್ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಅಂದಿನಿಂದ ಅವರು ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಾಪಗೌಡ ಪಾಟೀಲ್ ಕುಟುಂಬಸ್ಥರು ಹಾಗೂ ಕೈ ಅಭ್ಯರ್ಥಿಯಿಂದ ಮತದಾನ:
ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಬೆಳಗಿನಿಂದಲೇ ಚುರುಕುಗೊಂಡಿದೆ. ಮತದಾರರು ಮತಗಟ್ಟೆ ಕೇಂದ್ರಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್. ಬಸವನಗೌಡ ತುರುವಿಹಾಳ ಬೆಳಗ್ಗೆ ನಾನಾ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತುರುವಿಹಾಳ ಗ್ರಾಮದ ಮತಗಟ್ಟೆ ಸಂಖ್ಯೆ 217ರಲ್ಲಿ ಮತದಾನ ಮಾಡಿದ್ರು.
![Raichur](https://etvbharatimages.akamaized.net/etvbharat/prod-images/11433472_thumb.jpg)
ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಕುಟುಂಬಸ್ಥರು ಕಿಲ್ಲೆ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ನೆರವೇರಿಸಿ, ಬಳಿಕ ಮೂವರು ಮಕ್ಕಳು ಹಾಗೂ ಇಬ್ಬರು ಸೊಸೆಯಂದಿರು ಮತಗಟ್ಟೆ ಸಂಖ್ಯೆ 88ರಲ್ಲಿ ಮತದಾನ ಮಾಡಿದ್ರು.
ಈ ವೇಳೆ ಮಾತನಾಡಿದ ಪ್ರತಾಪಗೌಡ ಪಾಟೀಲ್ ಪುತ್ರ ಪ್ರಸನ್ನ ಪಾಟೀಲ್ 20 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.