ರಾಯಚೂರು: ಪಕ್ಷದಲ್ಲಿ ಕೆಲವರು ಅವರ ಅಭಿಪ್ರಾಯ ಹೇಳುತ್ತಾರೆ. ಆದ್ರೆ ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಏನೇ ತೀರ್ಮಾನ ಮಾಡಿದರೂ ಅದು ಹೈಕಮಾಂಡ್ ನಿರ್ಣಯವೇ ಅಂತಿಮ ಎಂದು ಸಣ್ಣ ನೀರಾವರಿ ಖಾತೆ ಸಚಿವ ಎನ್ ಎಸ್ ಬೋಸರಾಜು ಹೇಳಿದರು.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ಕೆ ಎನ್ ರಾಜಣ್ಣನವರು ರಾಜ್ಯ ಸರ್ಕಾರದಲ್ಲಿ ಮೂರು ಮಂದಿಗೆ ಡಿಸಿಎಂ ಹುದ್ದೆಗಳನ್ನು ನೀಡಬೇಕು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದರು. ಮೂರು ಮಂದಿಯನ್ನು ಡಿಸಿಎಂ ಮಾಡಿದ್ರೆ ತಪ್ಪೇನಿಲ್ಲ. ಅನೇಕ ರಾಜ್ಯಗಳಲ್ಲಿ ಮೂರು ಜನರನ್ನು ಡಿಸಿಎಂ ಮಾಡಿದ್ದಿದೆ. ಮಾಡಿದ್ರು ನಡೆಯುತ್ತೆ ಮಾಡದಿದ್ದರೂ ನಡೆಯುತ್ತೆ. ಆದ್ರೆ ನಿರ್ಧಾರ ಮಾಡುವುದು ಮಾತ್ರ ಹೈಕಮಾಂಡ್ ಎಂದರು.
ಯಾವುದೋ ಸಭೆ, ಸಂದರ್ಭದಲ್ಲಿ ಹೇಳಿರ್ತಾರೆ. ಇಲ್ಲಿ ಏನೇ ಮಾಡಬೇಕಾದರೂ ಸಿಎಂ ಹಾಗೂ ಪಕ್ಷದ ಅಧ್ಯಕ್ಷರ ಗಮನಕ್ಕೆ ತಂದು ಹೈಕಮಾಂಡ್ ಮುಂದೆ ಹೋಗಬೇಕು. ಈ ರೀತಿ ನಿಯಮ ನಮ್ಮ ಪಕ್ಷದಲ್ಲಿದೆ. ಒಂದು ರಾಜ್ಯದಲ್ಲಿ ಒಂದು, ಇನ್ನೊಂದು ರಾಜ್ಯದಲ್ಲಿ ಒಂದು ನಿಯಮ ಮಾಡಲ್ಲಾ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲೆಡೆ ಒಂದೇ ಪಾಲಿಸಿ ಮಾಡುತ್ತಾರೆ. ಹೈಕಮಾಂಡ್ ಏನು ಮಾಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಡಿಸಿಎಂ ಮಾಡಿದರೆ ಒಳ್ಳೆಯದು ಆಗುತ್ತೆ ಅನ್ನೋದಿದೆ ಆದ್ರೆ ಮೇಲಿಂದ ನಿರ್ಧಾರ ಆಗಬೇಕು. ನಾಳೆ ನಾಡಿದ್ದು ಎಲ್ಲರೂ ಒಂದೆಡೆ ಸೇರುತ್ತಾರೆ ಅವರು ಅಲ್ಲಿ ತೀರ್ಮಾನ ಮಾಡಲಿ, ಸಿಎಂ, ಕಾಂಗ್ರೆಸ್ ಅಧ್ಯಕ್ಷರು, ಅಖಿಲ ಭಾರತ ಅಧ್ಯಕ್ಷರು ಇರ್ತಾರೆ. ರಾಹುಲ್ ಗಾಂಧಿ ಬರ್ತಾರೆ, ಎಲ್ಲರೂ ಏನ್ ತೀರ್ಮಾನ ಮಾಡ್ತಾರೆ ಮಾಡಲಿ. ಮೂರು ಮಂದಿ ಉಪಮುಖ್ಯಮಂತ್ರಿ ಮಾಡ್ತಾರೆ ಅಂದ್ರೆ ಮಾಡಲಿ ಪರವಾಗಿಲ್ಲ, ನಮ್ಮಲ್ಲಿ ಯಾರೂ ಈ ವಿಷಯ ಎತ್ತಿಲ್ಲ ಸಂದರ್ಭ ಬಂದಾಗ ಹೇಳಿರ್ತಾರೆ ಎಂದು ತಿಳಿಸಿದರು.
ಮೂವರು ಡಿಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಲ್ಲ: ಖರ್ಗೆ
ಮೂವರು ಡಿಸಿಎಂ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್ ಮುಂದೆ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಜನ ಉಪಮುಖ್ಯಮಂತ್ರಿಗಳನ್ನು ಮಾಡಬೇಕು ಎನ್ನುವ ಸಚಿವ ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ರಾಜಣ್ಣ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಎಲ್ಲರಿಗೂ ಹೈಕಮಾಂಡ್ ಮುಂದೆ ತಮ್ಮ ಅಭಿಪ್ರಾಯ ಹೇಳಲು ಸ್ವಾತಂತ್ರ್ಯವಿದೆ. ಹೀಗಾಗಿ, ಮೂವರು ಡಿಸಿಎಂ ಅಂತಾದರೂ ಹೇಳಲಿ ಐವರು ಡಿಸಿಎಂ ಅಂತಾದರೂ ಹೇಳಲಿ, ಅದು ಅವರಿಗೆ ಬಿಟ್ಟದ್ದು. ಆದರೆ ನನಗೆ ಗೊತ್ತಿರುವ ಮಾಹಿತಿಯ ಪ್ರಕಾರ ಹೈಕಮಾಂಡ್ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂಓದಿ: ಶಿವರಾಮ್ ಹೆಬ್ಬಾರ್ ನಮ್ಮವರು, ಕಾಂಗ್ರೆಸ್ ಬಾಗಿಲು ಅವರಿಗೆ ಸದಾ ತೆರೆದಿಟ್ಟಿದ್ದೇವೆ: ಸಚಿವ ಮಂಕಾಳು ವೈದ್ಯ