ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ನೀರಿಗೆ ಹಾಹಾಕಾರ ಉಂಟಾಗಿದ್ದು, ಪುರಸಭೆ ವಾರಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿರುವ ಕಾರಣ ಸಾರ್ವಜನಿಕರು ಖಾಸಗಿ ಪ್ಲಾಂಟ್ಗಳ ಮೂಲಕ ಹಣ ನೀಡಿ ನೀರು ಖರೀದಿಸುವಂತಾಗಿದೆ.
ಜಿಲ್ಲೆಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದರೂ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆ ಸಾರ್ವಜನಿಕರು ನೀರಿಗಾಗಿ ತಿವ್ರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಐದು ವರ್ಷಗಳಿಂದ ತಾಲೂಕಿನಲ್ಲಿ ಬರ ಆವರಿಸಿದ್ದು, ನೀರಿನ ವಿಷಯದ ಕುರಿತು ಸ್ಥಳೀಯ ನಾಯಕರು ರಾಜಕೀಯ ಕೆಸರೆರಚಾಟ ನಡೆಸಿದ್ದರು. ಈ ಹಿಂದೆ ಅಂದಿನ ಮುಖ್ಯಾಧಿಕಾರಿ ನೀರಿನ ಪರಿಸ್ಥಿತಿ ಅರಿತು ಬೋರ್ವೆಲ್ಗಳನ್ನು ಬಾಡಿಗೆ ತೆಗೆದುಕೊಂಡು ಪ್ರತಿ ವಾರ್ಡ್ಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ ಮಾಡಿದ್ದರು.
ಆದ್ರೆ ಈಗ ಭೀಕರ ಬರ ಪರಿಸ್ಥಿತಿಯ ನಡುವೆಯೂ ಯಾವುದೇ ವ್ಯವಸ್ಥೆ ಮಾಡದ ಪರಿಣಾಮ ಕುಡಿಯಲು ಹಾಗೂ ದಿನ ಬಳಕೆಗೂ ಖಾಸಗಿ ಪ್ಲಾಂಟ್ಗಳಿಂದ ನೀರು ತರಿಸುವಂತಾಗಿದೆ. ನೀರಿನ ಸಮಸ್ಯೆ ಬಗ್ಗೆ ಪುರಸಭೆಗೆ ಮನವರಿಕೆ ಮಾಡಿದರೆ ನೀರು ಬಿಡುವುದಾಗಿ ಹೇಳುತ್ತಾರೆ ವಿನಾ ಖಾಸಗಿ ಪ್ಲಾಂಟ್ಗಳಿಂದ ನೀರು ಖರೀದಿಸುವುದು ತಪ್ಪಿಲ್ಲ. ಇತ್ತ ನೀರಿನ ಸಮಸ್ಯೆಯನ್ನೇ ಬಂಡವಾಳವಾಗಿಸಿಕೊಂಡು ಹಣ ಗಳಿಸಲು ಅನೇಕ ಪ್ಲಾಂಟ್ಗಳು ತಲೆ ಎತ್ತಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಜಿಲ್ಲೆಯಲ್ಲಿ ಕೃಷ್ಣ, ತುಂಗಭದ್ರಾ ನದಿಗಳೆರಡು ಹರಿಯುತ್ತಿದ್ದರೂ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಶಾಶ್ವತ ಪರಿಹಾರ ಬಿಡಿ, ಬರ ಹಿನ್ನೆಲೆಯಲ್ಲಿ ತುರ್ತು ಕಾರ್ಯಗಳು ಮಾಡಲಾಗುತ್ತಿಲ್ಲ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ.