ರಾಯಚೂರು: ರಾಜ್ಯದಲ್ಲಿ 32 ಜಿಲ್ಲೆಗಳಿವೆ ಎಂದು ಹೇಳಿಕೆ ನೀಡಿ ಎಲ್ಲರ ಟೀಕೆಗೆ ಗುರೆಯಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದಕ್ಕೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಸರ್ಕಾರದ ಅಂಕಿ-ಅಂಶಗಳ ಪ್ರಕಾರ 30 ಜಿಲ್ಲೆಗಳಿವೆ. ಸಂಘಟನೆ ಹಾಗೂ ಅಭಿವೃದ್ಧಿಗಾಗಿ ರಾಜ್ಯವನ್ನು ನಾವು 36 ಜಿಲ್ಲೆಗಳಾಗಿ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಯಾದಗಿರಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾನು ಈಗಾಗಲೇ 31 ಜಿಲ್ಲೆ ಪ್ರವಾಸ ಮುಗಿಸಿದ್ದು, ಇದು 32 ನೇ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದರು.
ನಗರದಲ್ಲಿ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಯಚೂರಿಗೆ ಕಾಂಗ್ರೆಸ್ ನ್ಯಾಯ ಸಲ್ಲಿಸಿಲ್ಲ. 60 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿದ್ಯುತ್ ನೀಡಿಲ್ಲ. ಜಿಲ್ಲೆಗೆ ಐಐಟಿ ವಂಚಿಸಿದ್ದು, ಇದೀಗ ಬಿಜೆಪಿ ಅದನ್ನು ಐಐಐಟಿ (ತ್ರಿಬಲ್ ಐಟಿ) ಮಾಡಿದೆ. ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನೂ ಪಿಎಂ ಆಗಬಹುದು ಎಂದು ಪ್ರಧಾನಿ ಮೋದಿ ಅವರು ತೋರಿಸಿಕೊಟ್ಟಿದ್ದಾರೆ ಎಂದರು.
ಜಿಲ್ಲೆ ಸೇರಿದಂತೆ ದೇಶದಲ್ಲಿ ಸಂಘಟನಾ ಪರ್ವ ನಡೆಯಲಿದೆ. ಶೀಘ್ರವೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಲಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕನಸನ್ನು ಮೋದಿ ನನಸು ಮಾಡುವಲ್ಲಿ ಹೊರಟಿದ್ದಾರೆ. ಮುಂದಿನ ನೂರು ವರ್ಷಗಳ ಕಾಲ ಚುನಾವಣೆ ಬರಲ್ಲ. ಸಂಪೂರ್ಣ ಕಾಂಗ್ರೆಸ್ ಮುಕ್ತ ದೇಶ ನಿರ್ಮಾಣವಾಗಲಿದೆ ಎಂದು ಹೇಳಿದರು.
ಮಧ್ಯಂತರ ಚುನಾವಣೆಯಿಲ್ಲ:
ಮುಂದಿನ ಮೂರು ವರ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರಲಿದ್ದಾರೆ. ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಎದುರಾಗುವುದಿಲ್ಲ. ರಾಯಚೂರಿನ ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಬದಲಿಗೆ ಕಳೆದ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಪರಾಭವಗೊಂಡಿರುವ ಬಸನಗೌಡ ತುರುವಿಹಾಳ ಅವರಿಗೆ ಉಪಚುನಾವಣೆಯಲ್ಲಿ ಟಿಕೆಟ್ ನೀಡಬಾರದು. ಹಾಗೆಯೇ ಇಲ್ಲಿನ ನಿಷ್ಠಾವಂತ ಕಾರ್ಯಕರ್ತರನ್ನು ಮರೆಯಬಾರದು ಎಂದು ಕಟೀಲ್ ಹೇಳಿದರು.