ಲಿಂಗಸುಗೂರು(ರಾಯಚೂರು) : ಭಾರತದ ಭಾಷಾ ನೀತಿ ಮರು ಪರಿಶೀಲಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಲಿಂಗಸುಗೂರಲ್ಲಿ ಪ್ರತಿಭಟನೆ ನಡೆಸಿದರು.
ಭಾರತ ಬಹುಭಾಷೆ, ಬಹು ಸಂಸ್ಕೃತಿ, ಬಹು ಧರ್ಮ ಒಳಗೊಂಡ ಐಕ್ಯತೆಯ ದೇಶ. ಸಂವಿಧಾನಾತ್ಮಕ ಭಾಷೆಗಳನ್ನು ವಿಭಜಿಸಿ ಹಿಂದಿ, ಇಂಗ್ಲಿಷ್ ಭಾಷೆಯೇತರರ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ಹಿಂದಿ ರಾಷ್ಟ್ರೀಯ ಭಾಷೆಯಾಗಿ ಒತ್ತಾಯಪೂರಕ ಹೇರಿಕೆ ಸಲ್ಲದು ಎಂದು ಆಕ್ಷೇಪಿಸಿದರು.
ಸಂವಿಧಾನಾತ್ಮಕವಾಗಿ ಭಾರತಕ್ಕೆ ಯಾವುದೇ ರಾಷ್ಟ್ರ ಭಾಷೆ ಇಲ್ಲ. 22 ಭಾಷೆಗಳನ್ನು ಸಮಾನಾಂತರವಾಗಿ ಕಾಣಬೇಕು. ಹಿಂದಿ ಭಾಷಾ ದಿನವಾಗಿ ಆಚರಿಸಲು ಮುಂದಾದ ಕೇಂದ್ರ ಸರ್ಕಾರ ರಾಷ್ಟ್ರದ ತುಂಬೆಲ್ಲ ಹಿಂದಿ ಒಂದೇ ಭಾಷೆ ಉಳಿಸುವ ಕುತಂತ್ರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿ ದಿವಸ, ಹಿಂದಿ ಸಪ್ತಾಹ, ಪಕ್ವಾಡಾ ಎಂಬಿತ್ಯಾದಿ ಕಾರ್ಯಕ್ರಮ ಮೂಲಕ ಒತ್ತಾಯದ ಹೇರಿಕೆ ಬಿಡಬೇಕು. ದಕ್ಷಿಣ ಭಾರತದ ರಾಜ್ಯಗಳ ಜನರ ಮೇಲೆ ಭಾಷೆ ಹೆಸರಲ್ಲಿ ನಡೆಯುವ ದೌರ್ಜನ್ಯ ತಡೆಯುವಂತೆ ಕರವೇ ಅಧ್ಯಕ್ಷ ಜಿಲಾನಿಪಾಷ ಒತ್ತಾಯಿಸಿದರು.