ರಾಯಚೂರು : ನಾರಾಯಣಪುರ ಬಲದಂಡೆ ನಾಲೆ ಯೋಜನೆಯ ಆಧುನೀಕರಣ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಕೊತ್ತದೊಡ್ಡಿಯಲ್ಲಿ ಪ್ರತಿಭಟನೆ ನಡೆಸಿದರು.
ನೀರಾವರಿ ಸೌಲಭ್ಯ ಕಲ್ಪಿಸಬೇಕೆಂದು ಮಾಜಿ ಪ್ರಧಾನಿ ಹೆಚ್ ಡಿ ದೇವಗೌಡರ ಕಾಲದಲ್ಲಿ ಕಾಮಗಾರಿ ನಿರ್ಮಾಣವಾಗಿತ್ತು. ಇದೀಗ ಸುಮಾರು 956 ಕೋಟಿ ರೂ. ವೆಚ್ಚದಲ್ಲಿ ಜಲಾಶಯದಿಂದ 0-95 ಕಿಲೋ ಮೀಟರ್ ಆಧುನೀಕರಣ ನಡೆಯುತ್ತಿದೆ. ಆದರೆ, ಗುತ್ತಿಗೆ ಪಡೆದಂತಹ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡದೆ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದರಿಂದ ಜಿಲ್ಲೆಯ ದೊಡ್ಡ ನೀರಾವರಿ ಯೋಜನೆ ಹಳ್ಳ ಹಿಡಿಯಲಿದ್ದು, ಒಂದೇ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಸಹ ಕಳಪೆ ಕಾಮಗಾರಿ ಬಗ್ಗೆ ಗಮನ ಹರಿಸುತ್ತಿಲ್ಲ. ಹೀಗಾಗಿ ಗುತ್ತಿಗೆ ಪಡೆದ ಕಂಪನಿ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿದ್ದಾರೆ.
ಜಿಲ್ಲಾ ಉಸ್ತುವರಿ ಸಚಿವರು, ಜನಪ್ರತಿನಿಧಿಗಳು ಸಹ ಮೌನವಹಿಸಿದ್ದು, ಜಿಲ್ಲಾ ಉಸ್ತುವರಿ ಸಚಿವರು ಕಮಿಷನ್ ತೆಗೆದುಕೊಂಡು ಹೋಗಲು ಜಿಲ್ಲೆಗೆ ಬರುತ್ತಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕಾಮಗಾರಿಯ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದರು.