ರಾಯಚೂರು : ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ಅವಕಾಶಾವಾದಿ ರಾಜಕಾರಣನಾ? ಇಲ್ಲ ಸಿದ್ಧಾಂತವಾದ ರಾಜಕಾರಣನಾ? ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರಿಗೆ ಲಾಭ ನಷ್ಟ ಅನ್ನೋದು ಆಮೇಲೆ, ಮೊದಲು ಒಬ್ಬರಿಗೊಬ್ಬರು ಬೈದುಕೊಂಡಿದ್ದರು. ಇವತ್ತು ಜನ ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಹೆಚ್ .ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ, ಅವರನ್ನು ಸಿಎಂ ಸ್ಥಾನದಿಂದ ತೆಗೆದಿದ್ಯಾರು?, ಕಾಂಗ್ರೆಸ್ ಜೊತೆಯಿದ್ದಾಗ ಬಿಜೆಪಿಯವರು ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು. ಬಿಜೆಪಿಯವರು ಸರ್ಕಾರ ತೆಗೆದರು. ಈಗ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಕೈಜೋಡಿಸುತ್ತಿದ್ದಾರೆ ಅಂದ್ರೆ ಏನು ಅರ್ಥ ಎಂದರು.
ಕಾವೇರಿ ನೀರಿನ ವಿವಾದಕ್ಕೆ ಕನ್ನಡಪರ ಸಂಘಟನೆಗಳ ವಿರುದ್ಧ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಮೇಕೆದಾಟು ಯೋಜನೆ ಆ ಭಾಗದ ರೈತರ ಹಿತಕಾಪಾಡಲು ಮಾಡಿದ ಯೋಜನೆಯಾಗಿದೆ. ಹೀಗಾಗಿ ಕಾಂಗ್ರೆಸ್ ದೊಡ್ಡ ಪಾದಯಾತ್ರೆ ಮಾಡಿತ್ತು. ಮೇಕೆದಾಟು ಯೋಜನೆಗೆ ಯಾವುದೇ ಅಡ್ಡಿ ಇಲ್ಲವೆಂದು ಸುಪ್ರಿಂ ಕೋರ್ಟ್ ಹೇಳಿದೆ. ನಮ್ಮ ನೀರು ನಾವು ಬಳಕೆ ಮಾಡಿಕೊಳ್ಳಬಹುದು ಅಂತ ಕೋರ್ಟ್ ಹೇಳಿದೆ. ಕನ್ನಡಪರ ಸಂಘಟನೆಗಳ ಬಗ್ಗೆ ಹರಿಹಾಯುವುದು ಇಲ್ಲ. ಮಳೆಯಿಲ್ಲದೆ ಕೆಆರ್ಎಸ್ ಡ್ಯಾಂನಲ್ಲಿ ನೀರಿಲ್ಲ. ಹೀಗಾಗಿ ಈಗ ಸಮಸ್ಯೆ ಉಂಟಾಗಿದೆ. ರೈತರ ಹಿತಕಾಪಾಡುವುದನ್ನು ನಮ್ಮ ಸರ್ಕಾರ ಮಾಡುತ್ತೆ ಎಂದು ಶರಣಪ್ರಕಾಶ್ ಪಾಟೀಲ್ ಹೇಳಿದರು.
ಜನ ಸ್ನೇಹಿ ಆಡಳಿತ ನೀಡುವ ಉದ್ದೇಶದಿಂದ ಇಂದಿನಿಂದ ಜನತಾ ದರ್ಶನ ಕಾರ್ಯಕ್ರಮ ರಾಜ್ಯಾದ್ಯಂತ ನಡೆಯಲಿದೆ. ರಾಯಚೂರು ಜಿಲ್ಲೆಯಲ್ಲಿ ಸಹ ಮಾಡಲಾಗುತ್ತಿದೆ. ಜನ ಸಾಮಾನ್ಯರ ಸಮಸ್ಯೆಗಳು ಸ್ಥಳೀಯವಾಗಿ ಪರಿಹರಿಸುವ ಕೆಲಸಗಳನ್ನು ಸ್ಥಳೀಯ ಅಧಿಕಾರಿಗಳೊಂದಿಗೆ ಮಾಡಿಕೊಳ್ಳಲಾಗುವುದು. ಅಲ್ಲದೆ, ಈ ಸಮಸ್ಯೆಗಳನ್ನು ನಾವು ಸರ್ಕಾರ ಮಟ್ಟದ ಗಮನಕ್ಕೆ ತಂದು ಪರಿಹಾರಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಇದಾದ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜನರ ತಮ್ಮ ಸಮಸ್ಯೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಅಲ್ಲಿಯೇ ಸೂಕ್ತ ಕ್ರಮ ತೆಗೆದುಕೊಳ್ಳುವುದಕ್ಕೆ ಸೂಚಿಸಿದರು. ಈ ವೇಳೆ ಶಾಸಕರಾದ ಬಸವನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಶರಣಗೌಡ ಪಾಟೀಲ್ ಭಯ್ಯಾಪುರ ಸಚಿವರಿಗೆ ಸಾಥ್ ನೀಡಿದರು.
ಕಾವೇರಿ ನೀರು ಸಮಸ್ಯೆ ಸರ್ಕಾರದ ವೈಫಲ್ಯದ ಕಾರಣ : ಮತ್ತೊಂದೆಡೆ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ-ತಮಿಳುನಾಡು ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ಜಲ ವಿವಾದದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ. ಕಾವೇರಿ ನೀರು ಹರಿಸಲು ತೀರ್ಪು ಬಂದಿರುವುದಕ್ಕೆ ಸುಪ್ರೀಂ ಕೋರ್ಟ್ ಅನ್ನು ದೂರುವುದಿಲ್ಲ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಕಾರಣ ಎಂದು ಆರೋಪಿಸಿದರು.
ಇದನ್ನೂ ಓದಿ : ಕಾವೇರಿ ಜಲ ವಿವಾದ: ರಾಜ್ಯ ಸರ್ಕಾರದ ವೈಫಲ್ಯ ಕಾರಣ- ಹೆಚ್.ಡಿ.ದೇವೇಗೌಡ