ರಾಯಚೂರು: ನಾರಾಯಣಪುರ ಜಲಾಶಯದ ಒಳ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತಕ್ಕೆ ಬಂದಿದೆ. ಇಂದು ಮಧ್ಯಾಹ್ನ ಜಲಾಶಯಕ್ಕೆ 2 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದ್ದು, ಜಲಾಶಯದಿಂದ 2.20 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿ ಬಿಡಲಾಗುತ್ತಿದೆ. ಇದರಿಂದಾಗಿ ಹೂವಿನಹೆಡಗಿ ಸೇತುವೆ ಮುಳಗಡೆಯಾಗುವ ಸಾಧ್ಯತೆಯಿದೆ.
ಗೂಗಲ್ ಅಲ್ಲಮ್ಮ ಪ್ರಭು ದೇಗುಲ, ಕೊಪ್ಪರ ಗ್ರಾಮದ ನದಿ ತೀರದಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯ ಮತ್ತು ನದಿ ತೀರದಲ್ಲಿರುವ ರೈತರ ಜಮೀನಿಗೆ ನೀರು ನುಗ್ಗುತ್ತಿದೆ.
ಈಗಾಗಲೇ ಪ್ರವಾಹವನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದು, ನದಿ ತೀರದ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ.