ರಾಯಚೂರು: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಜನತೆ ತತ್ತರಿಸಿ ಹೋಗಿದ್ದು, ಜನ-ಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪೂಲಭಾವಿ ಗ್ರಾಮಕ್ಕೆ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಪರಿಣಾಮ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ.
ಗ್ರಾಮದ ಹೊರವಲಯದಲ್ಲಿರುವ ಹೊಲ-ಗದ್ದೆಗಳಿಗೆ ನೀರು ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಅಲ್ಲದೇ ಗ್ರಾಮದಲ್ಲಿ ಬಸಪ್ಪ ಎನ್ನುವರ ಮನೆ ಬಿದ್ದಿದ್ದು, ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲವೆಂದು ಹೇಳಲಾಗುತ್ತಿದೆ. ಇತ್ತ ನಗರದಲ್ಲಿ ಸಹ ಭಾರಿ ಮಳೆ ಸುರಿದ ಪರಿಣಾಮ ಸಿಯಾತಲಾಬ್ ಏರಿಯಾದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಪ್ರತಿ ಬಾರಿಯೂ ಹೆಚ್ಚು ಮಳೆಯಾದಾಗ ಈ ಬಡಾವಣೆ ನಿವಾಸಿಗಳು ಇದೇ ರೀತಿ ತೊಂದರೆ ಅನುಭವಿಸುತ್ತಾರೆ. ಆದರೆ ನಮಗೆ ಯಾರೂ ಶಾಶ್ವತವಾಗಿ ಪರಿಹಾರ ಕಲ್ಪಿಸುತ್ತಿಲ್ಲ. ಇಷ್ಟೆಲ್ಲಾ ತೊಂದರೆಯನ್ನು ನಾವು ಅನುಭವಿಸಿದರೂ, ಯಾವೊಬ್ಬ ಅಧಿಕಾರಿಯಾಗಲಿ, ಚುನಾಯಿತ ಪ್ರತಿನಿಧಿಗಳು ನಮ್ಮ ನೋವನ್ನು ಕೇಳುತ್ತಿಲ್ಲ ಎಂದು ಬಡಾವಣೆ ನಿವಾಸಿಗಳು ನೋವು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಭಾರಿ ಮಳೆ.. ಬೈಕ್ ಸಮೇತ ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ - ಮೊಬೈಲ್ನಲ್ಲಿ ದೃಶ್ಯ ಸೆರೆ
ವಿಜಯನಗರದಲ್ಲಿಯೂ ಉತ್ತಮ ಮಳೆ: ವಿಜಯನಗರ ಜಿಲ್ಲೆಯಲ್ಲೂ ಕಳೆದ ಎರಡು ದಿನಗಳಿಂದ ವರುಣನ ಆರ್ಭಟ ಇರುವುದರಿಂದ ಕೆರೆ ಕಟ್ಟೆಗಳು ಭರ್ತಿಯಾಗಿವೆ. ತಾಲೂಕಿನ ಕೂಡ್ಲಿಗಿ - BB ತಾಂಡಾ ಮಧ್ಯದ ಸಂಪರ್ಕ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲದೇ ರಭಸವಾಗಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಯೇ ಬೈಕ್ ಸವಾರರು ದಾಟುತ್ತಿದ್ದಾರೆ.