ರಾಯಚೂರು : ಮಸ್ಕಿ ವಿಧಾನಸಭಾ ಉಪ ಚುನಾವಣೆ ಕ್ಷೇತ್ರದ ಮತದಾರರ ಸ್ವಾಭಿಮಾನದ ಚುನಾವಣೆಯಾಗಿದೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಶುಕ್ರವಾರ ಮಸ್ಕಿಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ರಾಜ್ಯದ ಬಿಜೆಪಿ ವಿರೋಧಿ ಅಲೆ ತೋರಿಸುತ್ತದೆ. ಬಿಜೆಪಿ ಸರ್ಕಾರ ಯಾವುದೇ ಹೊಸ ಯೋಜನೆಗಳನ್ನ ತರಲಿಲ್ಲ. ಬದಲಾಗಿ ನಮ್ಮ ಸರ್ಕಾರದ ಜನಪರ ಯೋಜನೆಗಳನ್ನ ರದ್ದು ಮಾಡಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ವರ್ಗ ನೆಮ್ಮದಿಯಿಂದಿಲ್ಲ. ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಿ ಮತದಾರರು ತೀರ್ಪು ಕೊಡಬೇಕಾಗಿದೆ ಎಂದರು.
ಈ ಸರ್ಕಾರ ಬಡವರ ಮೇಲೆ, ನೌಕರರ ಮೇಲೆ ದಬ್ಬಾಳಿಕೆ ಮಾಡುತ್ತಿದೆ. ಸಾರಿಗೆ ಸಿಬ್ಬಂದಿಗೆ 6ನೇ ವೇತನ ಆಯೋಗ ನಾಲ್ಕು ವರ್ಷಕ್ಕೆ ಒಮ್ಮೆ ಜಾರಿಯಾಗಬೇಕು. ಕೇಂದ್ರ ಸರ್ಕಾರ ಲೂಟ್ ಇಂಡಿಯಾ, ಸೇಲ್ ಇಂಡಿಯಾ ಆಗಿದೆ. 30 ಲಕ್ಷ ಕೋಟಿ ವ್ಯವಹಾರ ಮಾಡುತ್ತಿರುವ ಎಲ್ಐಸಿಯನ್ನ ಖಾಸಗೀಕರಣ ಮಾಡಲು ಹೊರಟಿದೆ. ಸಂವಿಧಾನದ ಮೀಸಲಾತಿ ರದ್ದುಪಡಿಸುವುದೇ ಇವರ ಉದ್ದೇಶ. ಅದಕ್ಕೆ ಎಲ್ಲಾ ಸಂಸ್ಥೆಗಳನ್ನ ಖಾಸಗೀಕರಣ ಮಾಡಲು ಹೊರಟಿದೆ. ನಮ್ಮ ದುರಾದೃಷ್ಟ ರಾಷ್ಟ್ರೀಕರಣ ಮಾಡುವವರನ್ನು ದೇಶದ್ರೋಹಿ ಎನ್ನುವಂತಾಗಿದೆ. ಖಾಸಗೀಕರಣ ಮಾಡುವವರು ದೇಶಪ್ರೇಮಿಗಳಾಗಿದ್ದಾರೆ. ಚುನಾವಣೆಯಲ್ಲಿ ಹಣ ಹಂಚುತ್ತಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬಿಜೆಪಿಯವರು ಹಂಚುವ ಹಣಕ್ಕೆ ಮತದಾರರು ಮಾರುಹೋಗಿದ್ದಾರೆ ಎಂದು ಖಾದರ್ ಆರೋಪಿಸಿದರು.
ಓದಿ : ಸಾರಿಗೆ ಸಚಿವ ಸವದಿ ತವರು ಕ್ಷೇತ್ರದಲ್ಲಿ ಕಿಡಿಗೇಡಿಗಳಿಂದ ಬಸ್ಸಿಗೆ ಕಲ್ಲು ತೂರಾಟ