ರಾಯಚೂರು: ನಿನ್ನೆ ರಾತ್ರಿ ಮಂತ್ರಾಲಯಕ್ಕೆ ಪುತ್ರರಾದ ಸಂಸದ ರಾಘವೇಂದ್ರ, ವಿಜಯೇಂದ್ರ ಮತ್ತು ಸೊಸೆಯರ ಜೊತೆ ಕುಟುಂಬ ಸಮೇತವಾಗಿ ಬಂದ ಬಿಎಸ್‌ವೈ ಇಂದು ಬೆಳಗ್ಗೆ ಶ್ರೀಮಠಕ್ಕೆ ಆಗಮಿಸಿ ಮೊದಲಿಗೆ ಗ್ರಾಮದ ದೇವತೆ ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ರಾಯರ ಬೃಂದಾವನ ದರ್ಶನ ಪಡೆದ ಯಡಿಯೂರಪ್ಪ ಅಭಿಷೇಕ ಸಲ್ಲಿಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದು ಕುಶಲೋಪಚರಿ ವಿಚಾರಿಸಿಕೊಂಡರು. ಬಿಎಸ್‌ವೈ ಜೊತೆ ಶ್ರೀಗಳು ಮಾತುಕತೆ ನಡೆಸಿದರು. ಈ ವೇಳೆ, ಶ್ರೀಗಳು 2009 ರಲ್ಲಿ ಭೀಕರ ಪ್ರವಾಹ ಬಂದಿತ್ತು. ಅಂದು ಸಿಎಂ ಆಗಿದ್ದಾಗ ಸಾಕಷ್ಟು ಪರಿಹಾರ ನೀಡಿದ್ದೀರಿ. ಕರ್ನಾಟಕ ಹಾಗೂ ಮಂತ್ರಾಲಯ ಸಂಪರ್ಕ ಸೇತುವೆ ನಿರ್ಮಾಣ ಮಾಡಿದ್ದೀರಿ ಎಂದು ಗುಣಗಾನ ಮಾಡಿದರು. ಬಳಿಕ ಶ್ರೀಮಠ ಸನ್ಮಾನಿಸಿ ಗೌರವಿಸಿತು.
ಓದಿ: ಸಿಎಂ ಬದಲಾವಣೆ ಕೇವಲ ಊಹಾಪೋಹ: ರಾಯರ ಸನ್ನಿಧಿಯಲ್ಲಿ ಯಡಿಯೂರಪ್ಪ ಪುನರುಚ್ಚಾರ
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ರಾಯರಲ್ಲಿ ಸಂಕಲ್ಪ: ಮಂತ್ರಾಲಯದಲ್ಲಿ ರಾಯರ ದರ್ಶನದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಯಡಿಯೂರಪ್ಪ ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪವನ್ನು ರಾಯರಲ್ಲಿ ಮಾಡಿದ್ದೇನೆ. ರಾಯರ ಭೇಟಿ ಉದ್ದೇಶವೇ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪವಾಗಿದೆ. ಮಂತ್ರಾಲಯಕ್ಕೆ ಬಂದಾಗ ನನಗೆ, ನಮ್ಮ ಕುಟುಂಬಕ್ಕೆ ಪ್ರೇರಣೆ ಸಿಕ್ಕಿದೆ. ಈ ಭೇಟಿ ಉದ್ದೇಶವೇ ರಾಯರ ಆಶಿರ್ವಾದ ಪಡೆದು, ರಾಜ್ಯಾದ್ಯಂತ ಓಡಾಟ ಮಾಡಿ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರೋದು. ನಮ್ಮ ಸಂಕಲ್ಪವನ್ನು ರಾಯರು ಈಡೇರಿಸುತ್ತಾರೆ. ಎಲ್ಲಾ ಮುಖಂಡರ ಜೊತೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇನೆ ಎಂದರು.
ಕೆಲವೊಬ್ಬರು ಈಗಾಗಲೇ ಸಿಎಂ ಆದೇ ಅನ್ನೋ ಹಾಗೆ ಮಾತನಾಡುತ್ತಿದ್ದಾರೆ. ಅದಕ್ಕೆ ಅವಕಾಶ ಕೊಡದೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ರಾಜ್ಯದಲ್ಲಿ ಭಾರಿ ಮಳೆಯಾಗುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ತಿಳಿಸಿದರು.