ರಾಯಚೂರು: ಕೇಂದ್ರ ಸರಕಾರ ನೆರೆ ಪರಿಹಾರ ಬಿಡುಗಡೆ ಮಾಡುವುದಕ್ಕೆ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ ಎಂದು ರಾಯಚೂರು ಬಿಜೆಪಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ವ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆ ಪರಿಹಾರ ನೀಡುವ ವಿಚಾರದಲ್ಲಿ ಯಾವುದೇ ಸರಕಾರವಿರಲಿ ಪರಿಹಾರವನ್ನ ತುರ್ತು ವಿತರಣೆ ಮಾಡಬೇಕು ಹೊರತು ವಿಳಂಬ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರ ನೆರೆ ಪರಿಹಾರ ವಿಳಂಬ ಮಾಡುತ್ತಿರುವುದಕ್ಕೆ ನನಗೆ ಬೇಸರವಿದೆ ಎಂದು ತಮ್ಮದೆ ಸರಕಾರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಪರಿಹಾರ ಪ್ರಸ್ತಾವನೆ ಸಲ್ಲಿಸುವ ವೇಳೆ ಅಧಿಕಾರಿಗಳು ಸಮರ್ಪಕವಾದ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ತಪ್ಪಿನಿಂದ ಅನುದಾನ ಬರುವುದಕ್ಕೆ ವಿಳಂಬವಾಗುತ್ತದೆ ಹಾಗೂ ಎರಡು ಸರ್ಕಾರದ ನಡುವೆ ವೈಮನಸ್ಸು ಉಂಟಾಗುತ್ತದೆ ಎಂದರು. ನೆರೆಯ ವಿಚಾರಕ್ಕೆ ಯಾವುದಾದರೂ ಅನುದಾನವನ್ನು ಕಡಿತ ಮಾಡಿ ಮೊದಲು ನೆರೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು..