ರಾಯಚೂರು: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ(ಆರ್ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಬಸವೇಶ್ವರರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಜಾಥಾ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಸಿದ ರೈತರು, ಆರ್.ಸಿ.ಇ.ಪಿ ಒಪ್ಪಂದದಿಂದ ಭಾರತೀಯ ರೈತರ ಕೃಷಿ ಸರಕುಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ಇಳಿಯುತ್ತದೆ. ಈ ಒಪ್ಪಂದ ಭಾರತೀಯ ರೈತರ ಮರಣ ಶಾಸನವಿದ್ದಂತೆ ಎಂದು ಕಿಡಿಕಾರಿದರು.
ಅಲ್ಲದೆ ಅನೇಕ ವಿದೇಶಿಗರು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಮಾರಲು ನೋಡುತ್ತಿದ್ದಾರೆ. ಇದರಿಂದ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಮಹಿಳೆಯರು ಜೀವನೋಪಾಯಕ್ಕಾಗಿ ಹೈನುಗಾರಿಕೆ ಮಾಡುತ್ತಿದ್ದು, ಅವರ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ದೂರಿದರು.
ಏನಿದು ಆರ್.ಸಿ.ಇ.ಪಿ ಒಪ್ಪಂದ:
ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್ಸಿಇಪಿ) ಎಂಬುದು 10 ಆಗ್ನೆಯ ಏಷಷ್ಯಾದ ರಾಷ್ಟ್ರಗಳ ಸಂಘ. ಆಸಿಯಾನ್ ಹಾಗೂ 6 ಪಾಲುದಾರ ದೇಶಗಳಾದ ಭಾರತ, ಚೀನಾ, ಜಪಾನ್ ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮಧ್ಯ ನಡೆಯುವ ಮುಕ್ತ ವ್ಯಾಪಾರ ಒಪ್ಪಂದ. ಇದ್ರಲ್ಲಿ 10 ಸದಸ್ಯ ರಾಷ್ಟ್ರಗಳಿವೆ.
ಈ ದೇಶದ ನಡುವೆ ಕೃಷಿ ಹೈನುಗಾರಿಕೆ, ಔಷಧಿ ಮತ್ತಿತರೆ ಕೃಷಿ ಉತ್ಪನ್ನಗಳ ಆಮದು ಹಾಗೂ ರಫ್ತು ಮೇಲೆ ಸುಂಕ ರಹಿತ ಯಾವುದೇ ಅಡೆತಡೆಯಿಲ್ಲದೇ ಮುಕ್ತ ವ್ಯಾಪಾರಕ್ಕೆ ಅವಕಾಶವಿರುತ್ತದೆ. ನಮ್ಮ ರಾಜ್ಯದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಜೀವನೋಪಾಯಕ್ಕಾಗಿ ನಡೆಸಲಾಗುತ್ತಿದೆ. ಈ ಒಪ್ಪಂದ ಭಾರತದ ರೈತರಿಗೆ ಮರಣಶಾಸನವಾಗಲಿದೆ ಎಂಬ ಆತಂಕ ಕಾಡುತ್ತಿದೆ.