ರಾಯಚೂರು: ಅಂಬಾನಿ ಕುಟುಂಬದ ಮುಕೇಶ್ ಅಂಬಾನಿಗೆ ಜನಿಸಿದ ಮೊಮ್ಮಗನನ್ನು ನೋಡಲು ದೇಶದ ಪ್ರಧಾನಿ ನರೇಂದ್ರ ಮೋದಿಗೆ ಸಮಯವಿದೆ. ಆದ್ರೆ ದೇಶಕ್ಕೆ ಅನ್ನ ನೀಡುವ ರೈತ ಹೋರಾಟಗಾರರ ಜತೆ ಮಾತನಾಡಲು ಸಮಯ ಇಲ್ಲದಿರುವುದು ದುರಾದೃಷ್ಟಕರ ಎಂದು ರೈತ ಮುಖಂಡ ಚಾಮರಸ ಮಾಲೀ ಪಾಟೀಲ್ ಆರೋಪಿಸಿದರು.
ನಗರದ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ದಿನಗಳಿಂದ ಪಂಜಾಬ್‌ನ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ರೈತರ ಸಮಸ್ಯೆ ಕುರಿತಂತೆ ಪ್ರಧಾನಿ ತೆರಳಿ ಮಾತನಾಡುವುದಾಗಲಿ, ಅವರನ್ನ ಕರೆದು ಮಾತನಾಡುವ ಯಾವುದೇ ಸೌಜನ್ಯ ತೋರುವ ಕೆಲಸ ಮಾಡಲಿಲ್ಲ. ಆದ್ರೆ ಅದಾನಿ - ಅಂಬಾನಿಯಂತವರ ಕುಟುಂಬಕ್ಕೆ ಮಗು ಜನಿಸಿದಾಗ ಹೋಗಲು ಸಮಯ ಇರುತ್ತದೆ. ದೇಶಕ್ಕೆ ಅನ್ನ ನೀಡುವ ರೈತರ ಮೇಲೆ ಪ್ರಧಾನಿ ಸಹನೆ ತೋರಿಸದೇ ಇರುವುದು ದುರದೃಷ್ಟಕರ ಎಂದರು.
ಇದನ್ನೂ ಓದಿ: ರಾಯಚೂರು: ವೈಭವದಿಂದ ನಡೆಯುತ್ತಿದ್ದ ಕೃಷಿ ಮೇಳ ರದ್ದು
ಕೊರೆಯುವ ಚಳಿ, ಜಲಫಿರಂಗಿ, ಲಾಠಿ ಚಾರ್ಜ್ನಂತಹ ಪರಿಸ್ಥಿತಿ ಎದುರಿಸಿ ತಮ್ಮ ಬೇಡಿಕೆಗಳಿಗೆ ಹೋರಾಟ ಮಾಡುತ್ತಿರುವವರನ್ನು ಕರೆದು ಮಾತನಾಡಿ, ಅವರ ಬೇಡಿಕೆ ಈಡೇರಿಸಲು ಪ್ರಧಾನಿ ಮುಂದಾಗಬೇಕು. ಇಲ್ಲದಿದ್ದರೆ ಈಗ ನಡೆಯುತ್ತಿರುವ ಹೋರಾಟಕ್ಕೆ ಮತ್ತಷ್ಟು ಬೆಂಬಲ ನೀಡಿ ಹೋರಾಟವನ್ನ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.