ರಾಯಚೂರು : ಜಿಲ್ಲೆಯಾದ್ಯಂತ ಈ ವರ್ಷ ಮುಂಗಾರು ಹಂಗಾಮಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಕಳೆದ ತಿಂಗಳಲ್ಲಿ ವಾಡಿಕೆಗಿಂತ ಶೇ.39ರಷ್ಟು ಹೆಚ್ಚು ಮಳೆ ಸುರಿದಿದ್ದರಿಂದ ಬಯಲು ಪ್ರದೇಶದ ನಾನಾ ಬೆಳೆಗಳಿಗೆ ಹಾನಿಯಾಗಿದೆ.
ಜೂನ್, ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಸುರಿದ ಮಳೆಯಿಂದ ಸಮೃದ್ಧಿಯ ಸಂಕೇತ ಸಿಕ್ಕಿತ್ತು. ಇದೇ ಖುಷಿಯಲ್ಲಿ ರೈತರು ತೊಗರಿ, ಹತ್ತಿ, ಸಜ್ಜೆ, ಜೋಳ ಇತ್ಯಾದಿ ಬಿತ್ತನೆ ಮಾಡಿದ್ದರು. ಆದರೆ, ನಿರಂತರ ಮಳೆಯಿಂದ ಬೆಳೆಯೆಲ್ಲ ಕಂದು ಬಣ್ಣಕ್ಕೆ ತಿರುಗುತ್ತಿದೆ.
ಸ್ವತಃ ರೈತರೇ ತಮ್ಮ ಜಮೀನುಗಳನ್ನು ಈಗ ನಾಶ ಮಾಡ್ತಿದ್ದಾರೆ. ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದ ಸಣ್ಣ ವೆಂಕಟ್ ರಾಯ್ ಗೌಡ ಅವರು ತಮ್ಮ ಹತ್ತು ಎಕರೆ ಜಮೀನಿನಲ್ಲಿ ಹತ್ತಿ ಬೆಳೆದಿದ್ದರು. ಸಾವಿರಾರು ರೂಪಾಯಿ ವ್ಯಯಿಸಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ರು. ಇನ್ನೇನು ಬೆಳೆ ಚೆನ್ನಾಗಿ ಬರುತ್ತಿದೆ ಎನ್ನುವಷ್ಟರಲ್ಲಿ ಮಳೆಯಿಂದ ಬೆಳೆ ಕೊಳೆತು ಹೋಗಿದೆ.
ಬೆಳೆಯನ್ನ ಪೋಷಣೆ ಮಾಡುವುದಕ್ಕೆ ಸುಮಾರು ಒಂದೂವರೆ ಲಕ್ಷ ರೂಪಾಯಿ ವ್ಯಯ ಮಾಡಿದ್ದಾರೆ. ಆದರೆ, ಇದೀಗ ಮಳೆಯಿಂದ ಹತ್ತಿ ಬೆಳೆ ನಾಶವಾಗುತ್ತಿದೆ. ತೊಗರಿ ಹೂಬಿಡುವ ಹಂತದಲ್ಲಿ ಭತ್ತವು ತೆನೆ ಕಟ್ಟುವುದರಿಂದ ಬೆಳೆ ಹಾನಿ ಸಂಭವಿಸಿರುವುದು ರೈತನನ್ನು ಸಂಕಷ್ಟಕ್ಕೆ ದೂಡಿದೆ.