ರಾಯಚೂರು: ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಚಿವ ಸಿ.ಟಿ. ರವಿ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಅಭಿವೃದ್ದಿ ಹಾಗೂ ಕೈಗೊಂಡ ಕಾಮಗಾರಿಯ ಕುರಿತಂತೆ ಅಧಿಕಾರಿಗಳಿಂದ ಅವರು ಮಾಹಿತಿ ಪಡೆದುಕೊಂಡರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸಚಿವರಿಗೆ ಮಾಹಿತಿಯನ್ನು ನೀಡಲಿಲ್ಲ. ಇದರಿಂದ ಗರಂ ಆದ ಸಚಿವರು, ಅಸಡ್ಡೆ ತೋರಿದ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ಪ್ರವಾಸಿ ತಾಣಗಳ ಅತಿಕ್ರಮಣ, ಬಿಡುಗಡೆ ಮಾಡಿದ ಅನುದಾನ ಬಳಕೆ ಮಾಡದೇ ಇರುವುದು, ಪ್ರವಾಸಿ ತಾಣಗಳನ್ನು ಸೂಕ್ತ ರೀತಿಯಲ್ಲಿ ಗುರುತಿಸದಿರುವುದಕ್ಕೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದಾಗ್ಲೂ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ.
ಈ ವೇಳೆ ಮಾತನಾಡಿದ ಸಚಿವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಬಿಡುಗಡೆಗೊಳಿಸಿದ ಅನುದಾನ ಸರಿಯಾಗಿ ಬಳಕೆಯಾಗಿಲ್ಲ. ಬಳಕೆ ಮಾಡದೆ ಇರುವ ಅನುದಾನವನ್ನು ವಾಪಾಸ್ ತೆಗೆದುಕೊಳ್ಳಲಾಗುವುದು ತಿಳಿಸಿದ ಅವರು, ಸದ್ಯ ಜಿಲ್ಲೆಯ ಇಲಾಖೆಯ ವ್ಯವಸ್ಥೆ ನೋಡಿದರೆ ಬೇಜವಾಬ್ದಾರಿ ಕಂಡು ಬರುತ್ತಿದೆ ಎಂದರು.
ಇನ್ನು ಸಭೆಗೂ ಮುನ್ನ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯಡಿ, ಫಲಾನುಭವಿಗಳಿಗೆ ಟ್ಯಾಕ್ಸಿ ಹಸ್ತಾಂತರಿಸಲಾಯ್ತು. ಸಭೆಯಲ್ಲಿ ಶಾಸಕರಾದ ಡಾ. ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಬಸವರಾಜ ಪಾಟೀಲ್ ಇಟಗಿ, ಸಂಸದ ರಾಜಾ ಅಮರೇಶ್ವರ ನಾಯಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಗೈರಾಗಿದ್ದರು.