ರಾಯಚೂರು: ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ತರಕಾರಿಗಳು ಹೊಲದಲ್ಲೇ ಕೊಳೆತು ಹಾಳಾಗುತ್ತಿದೆ. ಹೀಗಾಗಿ ನಿಗದಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಸರಬರಾಜು ಆಗುತ್ತಿಲ್ಲ. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.
ಕಳೆದ ಮೂರು ದಿನಗಳ ಹಿಂದೆ ನಿರಂತರವಾಗಿ ಜಿಲ್ಲೆಯಲ್ಲಿ ಸುರಿದ ಜಿಟಿ ಜಿಟಿ ಮಳೆಯಿಂದ ಹೊಲದಲ್ಲಿ ಬೆಳೆಯಲಾಗಿದ್ದ ತರಕಾರಿಗಳು ಸಂಪೂರ್ಣ ಹಾಳಾಗಿದ್ದು, ಬೆಳಗಾವಿ, ಬೆಂಗಳೂರು, ಚಿಕ್ಕಬಳ್ಳಾಪುರ ದಿಂದ ಬರಬೇಕಾದ ತರಕಾರಿ ಬಾರದ ಹಿನ್ನೆಲೆ ಬೆಲೆ ಏರಿಕೆ ಆಗಿದೆ.
ಜಿಲ್ಲಾ ಕೇಂದ್ರದಲ್ಲಿರುವ ತರಕಾರಿ ಮಾರುಕಟ್ಟೆಯು ನಗರದ ಸುತ್ತಮುತ್ತಲಿನ ಗ್ರಾಮಗಳ ಅವಲಂಬನೆಯಲ್ಲಿವೆ. ಮುಂದಿನ ಕೆಲ ದಿನಗಳವರೆಗೆ ತರಕಾರಿ ಬೆಲೆ ಏರಿಕೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಹಸಿಮೆಣಸಿನಕಾಯಿಗೆ 100 ರೂ. ಕೆಜಿ ಬದನೆಯಕಾಯಿಗೆ 80 ರೂ. ಕೆಜಿ ಸೌತೆಕಾಯಿಗೆ 80 ರೂ. ಹಾಗೂ ಕೆಜಿ ಚೊಟ್ಟಿಗೆ 100 ರೂಪಾಯಿ ದರವಿದೆ. ಹೀಗಾಗಿ ತರಕಾರಿ ಕೊಂಡುಕೊಳ್ಳಲು ಜನ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಇದೆ.