ರಾಯಚೂರು: ಕೈ ನಾಯಕರು ಅಧಿಕಾರ ಕಳೆದುಕೊಂಡ ಮೇಲೆ ನಿರುದ್ಯೋಗಿಗಳಾಗಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ 104 ಸ್ಥಾನ ದಕ್ಕಿದ್ದರೂ ಅಧಿಕಾರ ಕೈತಪ್ಪಿ ಹೋಗಿತ್ತು. ಆದರೆ, ಈಗ ಮತ್ತೆ ಕೈ ಸೇರಿದೆ. ಇನ್ನೂ ಮೈತ್ರಿ ಸರ್ಕಾರದವರೂ ತಮ್ಮ ಕೈಯಿಂದಲೇ ತಮ್ಮ ಅಧಿಕಾರವನ್ನ ಪತನ ಮಾಡಿಕೊಂಡಿದ್ದಾರೆ ಅಷ್ಟೇ ಎಂದರು.
ಇನ್ನೂ, ಉಪಮುಖ್ಯಮಂತ್ರಿ ಸ್ಥಾನದ ಕುರಿತು ನಾನೇನು ಹೇಳಲಾರೆ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ಪಕ್ಷ ನೀಡಿದ ಕೆಲಸವನ್ನ ನಾನು ಮಾಡುತ್ತೀನಿ ಅಷ್ಟೇ ಎಂದರು.
ಇನ್ನೂ ವಿಜಯನಗರ ಜಿಲ್ಲೆ ಸ್ಥಾಪನೆ ವಿಚಾರವನ್ನು ಸದ್ಯಕ್ಕೆ ಕೈ ಬಿಟ್ಟಿದ್ದು, ಉಪ ಚುನಾವಣೆ ಮುಗಿಯುವವರೆಗೂ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಚುನಾವಣೆ ನಂತರ ಶೀಘ್ರವೇ ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಇನ್ನೂ ಇದೇ ವೇಳೆ ಆರೋಗ್ಯ, ಆಸ್ಪತ್ರೆಗಳ ಕುರಿತು ಮಾತನಾಡಿದ ಅವರು, ರಾಜ್ಯದ ಸರಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಸಂಸ್ಥೆಗಳ ಏಕಸ್ವಾಮ್ಯತೆ ಹೆಚ್ಚಿರುವುದು ಗಮನಕ್ಕೆ ಬಂದಿದೆ. ಖಾಸಗಿ ಆಸ್ಪತ್ರೆಗಳಿಗೆ ಅನಗತ್ಯವಾಗಿ ರೋಗಿಗಳನ್ನು ತೆರಳುವಂತೆ ಶಿಫಾರಸು ಮಾಡುವುದು. ಔಷಧಕ್ಕೆ ಚೀಟಿ ಬರೆದು ಹೊರಗಿನಿಂದ ತರುವಂತೆ ಸೂಚಿಸುವುದನ್ನು ಸಹಿಸಲಾಗದು. ಶೀಘ್ರವೇ ಅದಕ್ಕೆಲ್ಲ ಕಡಿವಾಣ ಹಾಕಲಾಗುತ್ತದೆ ಎಂದರು.
ಇದೇ ಸಂದರ್ಭ ಹೊರ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸ್ವಚ್ಚತೆ ಕಾರ್ಮಿಕರಿಗೆ ವೇತನವನ್ನ ನೇರವಾಗಿ ಅವರ ಖಾತೆಗೆ ಜಮಾ ಮಾಡುವಂತಹ ಕೆಲಸ ಮಾಡಲಾಗುವುದು ಎಂದರು.