ರಾಯಚೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯತ್ತಿರುವ ಭಾರತ್ ಜೋಡೋ ಯಾತ್ರೆ ಜಿಲ್ಲೆಯಲ್ಲಿ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಹೊರವಲಯದ ಆನಂದ ಹೈಸ್ಕೂಲ್ನಲ್ಲಿ ನಿನ್ನೆ ವಾಸ್ತವ್ಯ ಹೂಡಿದ್ದ ರಾಹುಲ್ ಇಂದು ಬೆಳಗ್ಗೆ 6:30 ರಿಂದ ತಮ್ಮ ಯಾತ್ರೆಯನ್ನು ಮತ್ತೆ ಆರಂಭಿಸಿದರು. ಕರ್ನಾಟಕದಲ್ಲಿ ಕೆಲ ಹೊತ್ತಿನಲ್ಲೇ ಭಾರತ್ ಜೋಡೋ ಕೊನೆಗೊಂಡು ತೆಲಂಗಾಣ ರಾಜ್ಯವನ್ನು ಪ್ರವೇಶಿಸಲಿದೆ.
ಕಳೆದ ಎರಡು ದಿನಗಳ ಹಿಂದೆ ಯಾತ್ರೆ ತುಂಗಭದ್ರಾ ಬ್ರಿಡ್ಜ್ ಮೂಲಕ ರಾಯಚೂರು ಜಿಲ್ಲೆಗೆ ಆಗಮಿಸಿತ್ತು. ಎರಡು ದಿನ ಸಂಚರಿಸಿದ ಬಳಿಕ ಯರಗೇರಾ ಹಾಗೂ ರಾಯಚೂರು ನಗರದಲ್ಲಿ ಸಾರ್ವಜನಿಕ ಸಭೆ ನಡೆದಿತ್ತು. ನಿನ್ನೆ ಸಂಜೆ ವಾಲ್ಕಾಟಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.
ಜಿಲ್ಲೆಯಲ್ಲಿ ಸುಮಾರು 50 ಕಿ.ಮೀ ಹೆಚ್ಚು ದೂರ ಕ್ರಮಿಸಿದ ಯಾತ್ರೆಯ 3ನೇ ದಿನವಾದ ಇಂದು 10 ಗಂಟೆಯ ಸುಮಾರಿಗೆ ತೆಲಂಗಾಣಕ್ಕೆ ತೆರಳುವ ಮೂಲಕ ಕರ್ನಾಟಕದಲ್ಲಿ ಯಾತ್ರೆ ಮುಕ್ತಾಯ ಕಾಣಲಿದೆ. ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸೇರಿದಂತೆ ಹಲವು ನಾಯಕರು ಇದ್ದರು.
ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾತ್ರೆ ಸಂಚರಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿತ್ತು.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮೋಹಕ ತಾರೆ ರಮ್ಯಾ