ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಳದ ಬರೆ ಬೀಳುವ ಸಾಧ್ಯತೆ ಇದೆ. ಇಂದು ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ದರ ಪರಿಷ್ಕರಣೆ ಪ್ರಸ್ತಾವನೆ ಚರ್ಚೆಗೆ ಬರಲಿದ್ದು, ದರ ಹೆಚ್ಚಳಕ್ಕೆ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಈಗಾಗಲೇ ನಾಲ್ಕು ರಸ್ತೆ ಸಾರಿಗೆ ನಿಗಮಗಳು ಶೇ 25ರಷ್ಟು ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಶಕ್ತಿ ಯೋಜನೆ ಹೊರೆ, ಇಂಧನ ವೆಚ್ಚ, ಬಾಕಿ ವೇತನ, ನಿರ್ವಹಣಾ ವೆಚ್ಚದ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವಂತೆ ನಿಗಮಗಳು ಮನವಿ ಮಾಡಿದ್ದವು. ಆದರೆ, ಸರ್ಕಾರ ಶೇ 15ರಷ್ಟು ಟಿಕೆಟ್ ದರ ಏರಿಕೆಗೆ ಒಲವು ಹೊಂದಿದೆ ಎನ್ನಲಾಗಿದೆ.
ಕಳೆದ ಹತ್ತು ವರ್ಷದಲ್ಲಿ ಎರಡು ಬಾರಿ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ. 2014 ಮತ್ತು 2020ರಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಬಳಿಕ ಟಿಕೆಟ್ ದರ ಏರಿಕೆ ಮಾಡಿರಲಿಲ್ಲ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಚರ್ಚಗೆ ಬರಲಿದ್ದು, ಶೇ 15ರಷ್ಟು ದರ ಪರಿಷ್ಕರಣೆಗೆ ಒಪ್ಪಿಗೆ ಸೂಚಿಸುವ ಸಾಧ್ಯತೆ ಇದೆ.
ಶೇ 15ರಷ್ಟು ದರ ಹೆಚ್ಚಳದಿಂದ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ದಿನಕ್ಕೆ ಸುಮಾರು 6-7 ಕೋಟಿ ರೂಪಾಯಿ ಆದಾಯ ಹೆಚ್ಚಳ ಆಗುವ ನಿರೀಕ್ಷೆ ಇದೆ. ಆ ಮೂಲಕ ವಾರ್ಷಿಕವಾಗಿ 3 ಸಾವಿರ ಕೋಟಿ ರೂಪಾಯಿಗೂ ಅಧಿಕ ಆದಾಯ ಬರುವ ನಿರೀಕ್ಷೆ ಇದೆ. ಈಗಾಗಲೇ ಸಾರಿಗೆ ನಿಗಮಗಳು ಶಕ್ತಿ ಯೋಜನೆ ಹಿನ್ನೆಲೆಯಲ್ಲಿ ತೀವ್ರ ಆದಾಯದ ಕೊರತೆ ಎದುರಿಸುತ್ತಿವೆ. ಇದರ ಮಧ್ಯೆ ವೇತನ ಬಾಕಿ ಪಾವತಿ ಮತ್ತು ವೇತನ ಪರಿಷ್ಕರಣೆಗೆ ಆಗ್ರಹಿಸಿ ನಾಲ್ಕು ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ ದರ ಪರಿಷ್ಕರಣೆಗೆ ಮುಂದಾಗಿದೆ.
ಮೊನ್ನೆ ಡಿ.31ರಂದು ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರದ ಖಾತ್ರಿಯೊಂದಿಗೆ 2,000 ಕೋಟಿ ಸಾಲ ಎತ್ತುವಳಿ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿತ್ತು. ಈ ಸಂಬಂಧ ಆದೇಶ ಹೊರಡಿಸಿತ್ತು. ನಾಲ್ಕು ರಸ್ತೆ ಸಾರಿಗೆ ನಿಗಮಗಳ ಭವಿಷ್ಯ ನಿಧಿ, ರಜೆ ನಗದೀಕರಣ, ಬಾಕಿ ವೇತನ, ಇಂಧನ ವೆಚ್ಚ ಸೇರಿ ಒಟ್ಟು 6,330 ಕೋಟಿ ರೂ. ಸಾಲ ರಸ್ತೆ ಸಾರಿಗೆ ನಿಗಮಗಳ ಮೇಲಿದೆ. ರಸ್ತೆ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ದರ ಪರಿಷ್ಕರಣೆ ಅನಿವಾರ್ಯವಾಗಿದೆ. ದರ ಪರಿಷ್ಕರಣೆ ಬಗ್ಗೆ ಈಗಾಗಲೇ ಸಚಿವ ರಾಮಲಿಂಗಾರೆಡ್ಡಿ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ : ಎಂಎಲ್ಸಿ ಹೆಚ್. ವಿಶ್ವನಾಥ್