ತುಮಕೂರು : ಮಕ್ಕಳಿಗೆ ಬಿಸಿಯೂಟ ತಯಾರಿಸುವಾಗ ಕುಕ್ಕರ್ ಸ್ಪೋಟಗೊಂಡು ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಿನ್ನೆ (ಬುಧವಾರ) ನಡೆದಿದೆ.
ಅಡುಗೆ ಸಹಾಯಕಿ ಉಮಾದೇವಿ (52)ಗೆ ಗಂಭೀರ ಗಾಯವಾಗಿದ್ದು, ಜಯಮ್ಮ (55) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹೊಸವರ್ಷದ ಹಿನ್ನೆಲೆ ನಿನ್ನೆ ಮಧ್ಯಾಹ್ನ ಮಕ್ಕಳಿಗೆ ಪಲಾವ್ ಮತ್ತು ಪಾಯಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅಡುಗೆ ಸಹಾಯಕಿ ಉಮಾದೇವಿಗೆ ಮಧುಗಿರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸುಮಾರು ಶೇ 30ರಷ್ಟು ದೇಹಕ್ಕೆ ಗಾಯವಾಗಿದ್ದು, ಗುಣಮಟ್ಟದ ಕುಕ್ಕರ್ ಕೊಡದೇ ಇರುವುದೇ ಘಟನೆಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಗಾಯಾಳು ಉಮಾದೇವಿಯವರ ಮಗ ವೇಣುಗೋಪಾಲ್ ಮಾತನಾಡಿ, ಪುರವರ ಸರ್ಕಾರಿ ಪ್ರೌಢಶಾಲೆಯಲ್ಲಿ ನಮ್ಮ ತಾಯಿ ಅಡುಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ಅಡುಗೆ ಮಾಡುವಾಗ ಕುಕ್ಕರ್ ಬ್ಲಾಸ್ಟ್ ಆಗಿದೆ. ಅಲ್ಲಿ ಯಾವುದೇ ರೀತಿಯ ಸುರಕ್ಷತೆಯ ಪರಿಕರಗಳಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಇಒ ಹಾಗೂ ಶಾಲೆಯ ಸಿಬ್ಬಂದಿ ಬಂದಿದ್ದರು. ನಾಳೆ ಶಾಲೆಯ ಬಳಿ ಹೋಗಿ ಪ್ರಾಥಮಿಕ ವರದಿಯನ್ನ ತೆಗೆದುಕೊಂಡು ಆ ಮೇಲೆ ಇಲಾಖೆ ಕಡೆಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದರು.
ಇದನ್ನೂ ಓದಿ : ಬೆಂಗಳೂರು: ಕುಕ್ಕರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಓರ್ವ ಸಾವು, ಮತ್ತೋರ್ವ ಗಂಭೀರ - Cooker Explosion - COOKER EXPLOSION