ರಾಯಚೂರು: ತಾಲೂಕಿನ ಶಕ್ತಿ ನಗರದಲ್ಲಿ ಆರ್‌ಟಿಪಿಎಸ್ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕಲ್ಲಿದ್ದಲು ಸಮಸ್ಯೆ ತಲೆದೋರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆಯ ಭೀತಿ ಎದುರಾಗಿದೆ.
ಶಕ್ತಿನಗರದ ಆರ್‌ಟಿಪಿಎಸ್‌ನಲ್ಲಿ ಒಟ್ಟು 8 ಘಟಕಗಳಿವೆ. ಇವುಗಳ ಪೈಕಿ 4 ಘಟಕಗಳಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದರೆ, ಇನ್ನುಳಿದ 4 ಘಟಕಗಳು ಕಲ್ಲಿದ್ದಲು ಸಮಸ್ಯೆಯಿಂದಾಗಿ ವಾರದಿಂದಲೇ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ.
ಒಟ್ಟು 1,720 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿರುವ ಆರ್ಟಿಪಿಎಸ್ನ 1,2,4,6ನೇ ಘಟಕಗಳಿಂದ ಈಗ 660 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದು, ಇನ್ನುಳಿದ 3,5,7,8ನೇ ಘಟಕಗಳು ಸ್ಥಗಿತವಾಗಿವೆ.
ಕಲ್ಲಿದ್ದಲು ಕೊರತೆ ಉಂಟಾದ ಕಾರಣ ವಿದ್ಯುತ್ ಉತ್ಪಾದನೆ ಘಟಕಗಳು ಸ್ಥಗಿತಗೊಂಡಿವೆ ಎಂದು ಹೇಳಲಾಗುತ್ತಿದೆ. ನಿತ್ಯ 11 ರೇಕ್ ಕಲ್ಲಿದ್ದಲು ಬಳಕೆಯಾಗುತ್ತಿತ್ತು. ಇದೀಗ ಮೂರ್ನಾಲ್ಕು ರೇಕ್‌ಗಳು ಮಾತ್ರ ಕಲ್ಲಿದಲು ಬರುತ್ತಿದೆ. ಒಂದು ರೇಕಿನಲ್ಲಿ ಸುಮಾರು 700 ರಿಂದ 800 ಟನ್ ಕಲ್ಲಿದ್ದಲು ಇರಲಿದೆ. ಆದರೆ ಕಲ್ಲಿದ್ದಲು ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗದೆ ತೊಡಕಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಾಗಿ ಈಗಾಗಲೇ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ: ಮುಂದಿನ 5 ದಿನ ವರ್ಷಧಾರೆಯ ಮುನ್ಸೂಚನೆ