ರಾಯಚೂರು: ಸೂರ್ಯ-ಚಂದ್ರರು ಇರುವವರೆಗೂ ಮೀಸಲಾತಿ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಯಚೂರಿನ ಕೃಷಿ ವಿವಿಯಲ್ಲಿ ಪರಿಶಿಷ್ಟ ಸಮುದಾಯಗಳಿಂದ ಇಂದು ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗ ದೇಶದಲ್ಲಿ 33 ಕೋಟಿ ಜನಸಂಖ್ಯೆ ಇತ್ತು. ಈಗ 130 ಕೋಟಿ ಜನಸಂಖ್ಯೆ ಇದೆ. ಕರ್ನಾಟಕದಲ್ಲಿ ಸ್ವಾತಂತ್ರ್ಯ ಬಂದಾಗ 6 ಜಾತಿಗಳು ಮಾತ್ರ ಎಸ್ಸಿಗೆ ಸೇರಿದ್ದವು. ಈಗ 103 ಜಾತಿಗಳು ಎಸ್ಸಿಗೆ ಸೇರಿವೆ. ಹಿಂದಿನ ಸರ್ಕಾರಗಳು ಎಸ್ಸಿಗೆ ಒಂದೊಂದೇ ಜಾತಿಯನ್ನು ಸೇರಿಸುತ್ತಾ ಹೋದರು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿಯೂ ಜನಸಂಖ್ಯೆಗೆ ಅನುಗುಣವಾಗಿ ಇರಬೇಕು ಎಂದು ಹೇಳಿದ್ದರು. ಬೇರೆ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇದೆ. ದೇಶದಲ್ಲಿ ಅಸ್ಪೃಶ್ಯತೆ, ನಿರಕ್ಷರತೆ ಇನ್ನೂ ಇದೆ. ಶಿಕ್ಷಣ ಮತ್ತು ಉದ್ಯೋಗ ಇಲ್ಲದೆ ಇದ್ದರೆ ಗುಲಾಮರಾಗಿ ದುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ ನೀಡಿದರೆ ಅವರು ಮುಖ್ಯ ವಾಹಿನಿ ಬರುತ್ತಾರೆ ಎಂದರು.
ನಾನು ಅಂಬೇಡ್ಕರ್‌ವಾದಿ. ಅದಕ್ಕಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದೇನೆ. ಸಾಮಾಜಿಕ ನ್ಯಾಯದ ಭಾಷಣ ಮಾಡಿದರೆ, ಸಾಮಾಜಿಕ ನ್ಯಾಯ ಸಿಗಲ್ಲ ಎಂದು ಸಿಎಂ ಬೊಮ್ಮಾಯಿ ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು. ಕಾಂಗ್ರೆಸ್ ಮಿತ್ರರೇ, ಈಗ ಎಲ್ಲಾ ಸಮುದಾಯದವರು ಜಾಗೃತರಾಗಿದ್ದಾರೆ. ಇನ್ನುಮುಂದೆ ನಿಮ್ಮ ನಾಟಕ ನಡೆಯಲ್ಲ. ಮೀಸಲಾತಿ ಹೆಚ್ಚಳ ಮತ್ತು ಒಳಮೀಸಲಾತಿಯನ್ನು ನಾವು ಮಾಡಿದ್ದೇವೆ. ಇದನ್ನು ಶೆಡ್ಯೂಲ್ 9ಕ್ಕೆ ಸೇರಿಸುವ ಶಕ್ತಿ ಇರುವುದು ಕೇವಲ ಡಬಲ್ ಇಂಜಿನ್ ಸರ್ಕಾರಕ್ಕೆ ಮಾತ್ರ. ಕರ್ನಾಟಕ ಬಸವಣ್ಣನವರ ಕಾಲದಿಂದಲೂ ಸಾಮಾಜಿಕ ಬದಲಾವಣೆಯಲ್ಲಿ ಮುಂದಿದೆ. ಯಾರಾದರೂ ಮೀಸಲಾತಿಯನ್ನು ಮುಟ್ಟಿದರೆ ಇಡೀ ರಾಜ್ಯದಲ್ಲಿ ಕಾಂತ್ರಿ ಆಗುತ್ತೆ. ಸೂರ್ಯ- ಚಂದ್ರ ಇರುವವರೆಗೂ ಮೀಸಲಾತಿ ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಬಡತನ ಶಾಪವಲ್ಲ, ಸ್ವಾಭಿಮಾನದ ಬದುಕು ಎಲ್ಲರಿಗೂ ಸಿಗಬೇಕು. ಏಳಿ ಎದ್ದೇಳಿ ಎಲ್ಲರೂ ಒಂದಾಗಿ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಕರೆ ನೀಡಿದರು. ಸಮಾರಂಭದಲ್ಲಿ ಪರಿಶಿಷ್ಟ ಸಮುದಾಯಗಳ ಮುಖಂಡರು ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ, ಸಚಿವ ಗೋವಿಂದ ಕಾರಜೋಳ, ಶಾಸಕ ಡಾ.ಶಿವರಾಜ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು, ಸಾವಿರಾರು ಜನರು ಉಪಸ್ಥಿತರಿದ್ದರು.
ಇದನ್ನೂ ಓದಿ: ಕೆಲವು ನಾಯಕರು ಹೋಗಿರುವುದರಿಂದ ಪಕ್ಷಕ್ಕೆ ಸ್ವಲ್ಪ ಡ್ಯಾಮೇಜ್ ನಿಜ: ಸಿಎಂ ಬೊಮ್ಮಾಯಿ