ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ನವೀಕರಣ ಹಾಗೂ ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಿಗೆ ಹಾಲಿ ಶಾಸಕರು ಟಾಂಗ್ ನೀಡಿರುವ ಪ್ರಸಂಗ ನಡೆದಿದೆ.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಮಾತನಾಡುತ್ತಿದ್ದರು. ಈ ವೇಳೆ ಮಾತನಾಡುವಾಗ ಪಟ್ಟಣದಲ್ಲಿ ಕೈಗೊಂಡಿರುವ ಕಾಮಗಾರಿಗಳು ಹಾಗೂ ರಸ್ತೆ ನಿರ್ಮಾಣ ವಿಷಯವನ್ನು ಪ್ರಸ್ತಾಪಿಸಿ, ಸರ್ಕಾರದಿಂದ ಕೋಟಿ ಕೋಟಿ ರೂಪಾಯಿ ಅನುದಾನ ಖರ್ಚು ಮಾಡಲಾಗುತ್ತಿದೆ. ಆದರೆ ಸಮಪರ್ಕವಾಗಿ ಕಾಮಗಾರಿ ನಡೆಯುತ್ತಿಲ್ಲವೆಂದು ಅಪಾದನೆ ಮಾಡಿದರು. ಜೊತೆಗೆ ಕಾಮಗಾರಿ ಇಲಾಖೆಯ ಅಧಿಕಾರಿಗಳು ಯಾರಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಮುಖಂಡರು ಇಲ್ಲಿ ಸರ್ಕಾರಿ ಕಾರ್ಯಕ್ರಮವಿದೆ. ಇಲ್ಲಿ ರಾಜಕೀಯ ಮಾತನಾಡುವುದು ಬೇಡ, ಇದಕ್ಕಾಗಿ ಇಲಾಖೆಯ ಪ್ರಗತಿಪರಿಶೀಲನೆ ಸಭೆ ಮಾಡೋಣವೆಂದರು.
ಆಗ ಮಾನಪ್ಪ ವಜ್ಜಲ್ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಸರ್ಕಾರಿ ಕಾಮಗಾರಿಗಳ ಬಗ್ಗೆ ಮಾತನಾಡುವುದು ಯಾಕೆ ಬೇಡ. ನಾನು ಮಾತನಾಡುವುದು ಪೂರ್ಣವಾಗಿ ಕೇಳಿ ಎನ್ನುತ್ತಿದ್ದರು. ಈ ಸಂದರ್ಭ ವೇದಿಕೆ ಕೆಳಗ ಇದ್ದ ಕಾಂಗ್ರೆಸ್ ಮುಖಂಡರು ಮಾಜಿ ಶಾಸಕರನ್ನು ತರಾಟೆಗೆ ತೆಗೆದುಕೊಂಡರೆ, ಇತ್ತ ಬಿಜೆಪಿ ಮುಖಂಡರು ಸಹ ಆಕ್ಷೇಪಾ ವ್ಯಕ್ತಪಡಿಸುತ್ತಿದ್ದರು. ಮುಂದೆ ಕಾಂಗ್ರೆಸ್ ಮುಖಂಡರ ಮಾತುಗಳಿಂದ ಮಾನಪ್ಪ ವಜ್ಜಲ್ ಹೇರು ಧ್ವನಿಯಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದೀರಾ ಅಥವಾ ಜಗಳವಾಡಲು ಬಂದಿದ್ದೀರಾ ಎಂದು ವಾಗ್ದಳಿ ನಡೆಸಿದರು. ಇದರಿಂದ ಕಾರ್ಯಕ್ರಮದಲ್ಲಿ ಗೊಂದಲ ವಾತಾವರಣ ನಿರ್ಮಾಣಗೊಂಡಿತು.
ಗೊಂದಲ ವಾತಾವರಣ ಹಾಗೂ ಕಾಂಗ್ರೆಸ್ ಮುಖಂಡರ ವರ್ತನೆಯಿಂದ ಮಾಜಿ ಶಾಸಕ ಮಾನಪ್ಪ ವಜ್ಜಲ್ ವೇದಿಕೆಯಿಂದ ನಿರ್ಗಮಿಸಿದರು. ಇದಾದ ಬಳಿಕ ಭಾಷಣ ಆರಂಭಿಸಿದ ಹಾಲಿ ಶಾಸಕ ಡಿ.ಎಸ್.ಹೂಲಗೇರಿ, ಕಾರ್ಯಕ್ರಮದ ಅರ್ಧಕ್ಕೆ ಎದ್ದು ಹೋಗುವುದು ಬೇಡ ಬನ್ನಿ ಎಂದರು. ಅಲ್ಲದೇ ಆಪಾದನೆ ಮಾಡಿದ ಬಳಿಕ ಅದಕ್ಕೆ ಉತ್ತರವನ್ನು ನೀಡುತ್ತೇನೆ ಬನ್ನಿ, ಆರೋಪ ಮಾಡುವುದಷ್ಟಲ್ಲೇ ಅದಕ್ಕೆ ಪ್ರತಿಉತ್ತರವನ್ನು ನಿಂತುಕೊಂಡು ಕೇಳಬೇಕು ಅದು ಗಂಡಸತನ, ಹಾಗೇ ಹೋದರೆ ಅದಕ್ಕೆ ಹೇಡಿತನ ಎನ್ನುತ್ತಾರೆ ಎಂದು ಗುಡುಗಿದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಯಾವ ವಿಚಾರಗಳನ್ನು ಮಾತನಾಡಬೇಕೋ ಅವುಗಳನ್ನು ಮಾತನಾಡಬೇಕು. ಅದುಬಿಟ್ಟು ರಾಜಕೀಯ ಮಾತನಾಡುವುದು ಸರಿಯಿಲ್ಲ. ಕೆಲಸ ಮಾಡುವ ಅಧಿಕಾರಿಗಳಿಗೆ ಕೆಲಸ ಮಾಡಲು ಬಿಟ್ಟಿಲ್ಲ. ಈಗ ಹೇಳುವುದಕ್ಕೆ ಬರುತ್ತೀರಾ. ಹಾಗಿದ್ದರೆ ಬನ್ನಿ ರಾಜಕೀಯವಾಗಿ, ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಬಹಿರಂಗ ಚರ್ಚೆಗೆ ಬನ್ನಿ, ನಾನು ಸಿದ್ಧವಿದ್ದೇನೆ ಎಂದು ಬಹಿರಂಗವಾಗಿ ಶಾಸಕ ಡಿ.ಎಸ್.ಹೂಲಗೇರಿ, ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ಗೆ ಸವಾಲು ಎಸೆದರು.
ಇದನ್ನೂ ಓದಿ: ನನ್ನ ಜೊತೆ ಯಾರು ಬರ್ತಾರೆ ಎಂಬುದು ವಾಜಪೇಯಿ ಜನ್ಮದಿನದವರೆಗೆ ಕಾಯಿರಿ: ಮಾಜಿ ಸಚಿವ ಜನಾರ್ದನ ರೆಡ್ಡಿ