ರಾಯಚೂರು: ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಆರ್ಥಿಕ ಸಮಸ್ಯೆ ತಲೆದೋರಿದ್ದು ಯೋಜನೆ ನೆನೆಗುದಿಗೆ ಬಿದ್ದಿದೆ.
ತುಂಗಾ ತೀರದಲ್ಲಿ ಬರುವ ತಾಲೂಕಿನ ಚಿಕ್ಕಮಂಚಾಲೆ ಗ್ರಾಮದ ಬಳಿ ನಗರದಿಂದ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಹಾಗೂ ಕುಡಿಯುವ ನೀರಿಗಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡುವ ಯೋಜನೆಯನ್ನ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಆದರೆ ಈ ಯೋಜನೆಗೆ ಕೊರೊನಾದಿಂದ ಆರ್ಥಿಕ ಸಂಕಷ್ಟ ಎದುರಾಗಿ, ಕಾಮಗಾರಿಗೆ ಇನ್ನೂ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಸ್ತಾವನೆ ಪರಿಶೀಲಿಸಲಾಗುತ್ತಿದೆ.
ಬಿರು ಬೇಸಿಗೆಯಲ್ಲಿ ಜಿಲ್ಲೆಯಲ್ಲಿ ಹಾಗೂ ಮಂತ್ರಾಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಸಮಸ್ಯೆಯನ್ನು ದೂರ ಮಾಡಲು 2019-20ನೇ ಸಾಲಿನ ಬಜೆಟ್ನಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 50 ಕೋಟಿ ರೂ. ಘೋಷಣೆ ಮಾಡಲಾಗಿತ್ತು. ಕಾಮಗಾರಿಗೆ ಡಿಪಿಆರ್ ಆಗಿ ಸರಿಸುಮಾರು 102 ಕೋಟಿ ರೂ ವೆಚ್ಚವಾಗಬಹುದೆಂದು ಅಂದಾಜಿಸಲಾಗಿತ್ತು. ಈ ಮೂಲಕ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಟೆಂಡರ್ ಪ್ರಕ್ರಿಯೆ ನಡೆಯಬೇಕಿತ್ತು. ಆದ್ರೆ ಅಷ್ಟರಲ್ಲಿ ಸರ್ಕಾರ ಬದಲಾವಣೆ ಆಗುವುದರ ಜತೆಗೆ ಕೊರೊನಾ ಮಹಾಮಾರಿ ಶುರು ಆಗಿ ಪ್ರಕ್ರಿಯೆ ವಿಳಂಬವಾಗುವ ಮೂಲಕ ನನೆಗುದಿಗೆ ಬೀಳುವಂತಾಗಿದೆ. ಈ ಬಗ್ಗೆ ಶಾಸಕ ಬಸವನಗೌಡ ದದ್ದಲ್ ಸದನದಲ್ಲಿ ಪ್ರಶ್ನಿಸಿದ್ದು, ಯೋಜನೆ ಜಾರಿಗೆ ಒತ್ತಾಯಿಸಿದ್ದಾರೆ.