ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ದುಷ್ಕರ್ಮಿಯೊಬ್ಬ ಚಾಕುವಿನಿಂದ 6 ಬಾರಿ ಇರಿದಿದ್ದಾನೆ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ನಟನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಕಳ್ಳತನ ಸಲುವಾಗಿ ಆತ ನಟನ ಮನೆಗೆ ಪ್ರವೇಶಿಸಿದ್ದನೆಂದು ವರದಿಯಾಗಿದೆ. ಎಲ್ಲದಕ್ಕೂ ಪೊಲೀಸ್ ತನಿಖೆ ಸಂಪೂರ್ಣಗೊಂಡ ಬಳಿಕವಷ್ಟೇ ಸ್ಪಷ್ಟ ಮಾಹಿತಿ ಸಿಗಲಿದೆ.
ಬಾಲಿವುಡ್‌ನಲ್ಲಿ ಇದೊಂದೇ ಪ್ರಕರಣವಲ್ಲ. ಇತರ ಕೆಲ ಸೆಲೆಬ್ರಿಟಿಗಳು ಸಹ ಆಘಾತಕಾರಿ ಹಲ್ಲೆಗಳು, ಬೆದರಿಕೆಗಳು ಮತ್ತು ಹಿಂಸಾತ್ಮಕ ಘಟನೆಗಳನ್ನು ಎದುರಿಸಿದ್ದಾರೆ. ಕೆಲ ಹೆಸರುಗಳು ಇಲ್ಲಿವೆ ನೋಡಿ.
ಶಾರುಖ್ ಖಾನ್: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಕಳೆದ ಹಲವು ವರ್ಷಗಳಲ್ಲಿ ಹಲವು ಬಾರಿ ಭದ್ರತಾ ಉಲ್ಲಂಘನೆಗಳಂತಹ ಘಟನೆಗಳನ್ನು ಎದುರಿಸಿದ್ದಾರೆ. ಹಾಗೇ, ಅಪರಿಚಿತ ವ್ಯಕ್ತಿಯೊಬ್ಬ ನಟನಿಗೆ 2024ರಲ್ಲಿ 50 ಲಕ್ಷ ರೂ.ಗಳ ಭಾರಿ ಮೊತ್ತದ ಸುಲಿಗೆ ಕೇಳುವ ಬೆದರಿಕೆ ಸಂದೇಶ ಕಳುಹಿಸಿದ್ದ. ಸಂದೇಶ ಕಳುಹಿಸಿದವರು ನಿರ್ದಿಷ್ಟ ಉದ್ದೇಶ ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದರು. ಅದಾಗ್ಯೂ, ಅಧಿಕಾರಿಗಳ ತ್ವರಿತ ಭದ್ರತಾ ಕ್ರಮಗಳ ಮೂಲಕ ನಟನ ಸುರಕ್ಷತೆಯನ್ನು ಖಾತ್ರಿಪಡಿಸಲಾಯಿತು.
ಸಲ್ಮಾನ್ ಖಾನ್: ಭಾಯ್ಜಾನ್ ಸಲ್ಮಾನ್ ಖಾನ್ಗೆ ಪದೇ ಪದೆ ಕೊಲೆ ಬೆದರಿಕೆಗಳು ಬರುತ್ತಿದ್ದು, ಇತ್ತೀಚಿನ ಘಟನೆ 2024ರಲ್ಲಿ ಸಂಭವಿಸಿದೆ. ಮುಂಬೈನ ಗ್ಯಾಲಾಕ್ಸಿ ಅಪಾರ್ಟ್ಮೆಂಟ್ನಲ್ಲಿರುವ ಅವರ ನಿವಾಸದ ಬಳಿ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡು ಹಾರಿಸಿದ್ದರು. ನಟನನ್ನು ಕೊಲ್ಲಲು ಗ್ಯಾಂಗ್ ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದರು. ನಂತರ 6 ಶಂಕಿತರನ್ನು ಬಂಧಿಸಲಾಯಿತು. ನಿರಂತರ ಬೆದರಿಕೆಗಳಿಂದಾಗಿ ಸಲ್ಮಾನ್ ಅವರು ಬಿಗಿ ಭದ್ರತಾ ಕಣ್ಗಾವಲಿನಲ್ಲಿದ್ದಾರೆ.
ರವೀನಾ ಟಂಡನ್: ವರದಿಗಳ ಪ್ರಕಾರ, 2024ರಲ್ಲಿ ನಟಿ ರವೀನಾ ಟಂಡನ್ ಅವರ ವಾಹನ ಮುಂಬೈನಲ್ಲಿ ಮೂವರು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಗಲಾಟೆಯಲ್ಲಿ ಸಿಲುಕಿದರು. ಅಜಾಗರೂಕ ಚಾಲನೆ ಆರೋಪ ಕೇಳಿಬಂದು ಗುಂಪೊಂದು ದಾಳಿಗೆ ಮುಂದಾಗಿತ್ತು. ಗುಂಪು ಅವರ ಕಾರನ್ನು ಸುತ್ತುವರೆದ ಬೆನ್ನಲ್ಲೇ ರವೀನಾ ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ಅದಾಗ್ಯೂ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಗೌಹರ್ ಖಾನ್: 2014ರ ಕಾರ್ಯಕ್ರಮವೊಂದರಲ್ಲಿ, ನಟಿ ಗೌಹರ್ ಖಾನ್ ಅವರ ಮೇಲೆ ಸಾರ್ವಜನಿಕ ಹಲ್ಲೆ ನಡೆಸಲಾಗಿತ್ತು. ಪ್ರೇಕ್ಷಕರಲ್ಲಿದ್ದ ವ್ಯಕ್ತಿಯೊಬ್ಬರು ನಟಿಗೆ ಕಪಾಳ ಮೋಕ್ಷ ಮಾಡಿದ್ದರು. ನಟಿ ಅಸಭ್ಯ ಉಡುಗೆ ಧರಿಸುವ ಮೂಲಕ ಧರ್ಮದ ತತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದರು. ಕ್ಯಾಮರಾದಲ್ಲಿ ಸೆರೆಯಾದ ಈ ಘಟನೆ ನಟಿ ಮತ್ತು ಪ್ರೇಕ್ಷಕರಿಗೆ ಶಾಕ್ ನೀಡಿತ್ತು. ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ತಡೆಯಲು ಪ್ರಯತ್ನಿಸಿದರೂ ಕೂಡಾ ನಟಿಯ ಕೆನ್ನೆಗೆ ಬೀಳೋ ಏಟನ್ನು ತಪ್ಪಿಸಲಾಗಲಿಲ್ಲ.
ಆಕಾಶ್ ಚೌಧರಿ: ಭಾಗ್ಯ ಲಕ್ಷ್ಮಿ ಮತ್ತು ಸ್ಪ್ಲಿಟ್ಸ್‌ವಿಲ್ಲಾ ಮೂಲಕ ಹೆಸರುವಾಸಿಯಾಗಿರೋ ನಟ ಆಕಾಶ್ ಚೌಧರಿ, ಅಭಿಮಾನಿಯೊಬ್ಬರನ್ನು ಎದುರಾದಾಗ ಕಠಿಣ ಪರಿಸ್ಥಿತಿಗೆ ಸಿಲುಕಿದರು. ನಟನೊಂದಿಗೆ ಒಂದೊಳ್ಳೆ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಅಭಿಮಾನಿ ಸಾಕಷ್ಟು ಸಿಟ್ಟಿಗೆದ್ದಿದ್ದರು. ಸ್ವಲ್ಪ ಸಮಯದ ನಂತರ, ಮತ್ತಷ್ಟು ಫೋಟೋಗಳಿಗೆ ಮುಂದೆ ಬರಲು ಆಕಾಶ್ ನಿರಾಕರಿಸಿದ ಹಿನ್ನೆಲೆ ಕೋಪಗೊಂಡ ಅಭಿಮಾನಿ ಅವರ ಮೇಲೆ ಪ್ಲಾಸ್ಟಿಕ್ ಬಾಟಲಿಯನ್ನು ಎಸೆದರು. ಆದ್ರೆ ಆಕಾಶ್ ಹೆಚ್ಚು ಪ್ರತಿಕ್ರಿಸಿದೇ ಹೊರಟರು.
ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್
ಪ್ರಿಯಾಂಕ್ ಶರ್ಮಾ: ರೋಡೀಸ್, ಸ್ಪ್ಲಿಟ್ಸ್‌ವಿಲ್ಲಾ ಮತ್ತು ಬಿಗ್ ಬಾಸ್‌ಗೆ ಹೆಸರುವಾಸಿಯಾದ ರಿಯಾಲಿಟಿ ಸ್ಟಾರ್ ಪ್ರಿಯಾಂಕ್ ಶರ್ಮಾ ಮೇಲೆ ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ ದಾಳಿ ನಡೆಸಲಾಯಿತು. ತಮ್ಮ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿದ್ದ ಸಂದರ್ಭ ಅಪರಿಚಿತನೋರ್ವ ಅವರ ಮೇಲೆ ಹಲ್ಲೆ ನಡೆಸಿದ್ದ. ಆ ವ್ಯಕ್ತಿಯನ್ನು ದೂರ ತಳ್ಳುವಲ್ಲಿ ಪ್ರಿಯಾಂಕ್ ಯಶಸ್ವಿಯಾದರು, ನಟನಿಗೆ ಆಸ್ಪತ್ರೆ ಸಿಬ್ಬಂದಿ ಸಹಾಯ ಮಾಡಿದ್ದರು.
ಇದನ್ನೂ ಓದಿ: ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು
ಜೀತು ವರ್ಮಾ: 2017ರಲ್ಲಿ, ಬಾಬಿ ಡಿಯೋಲ್ ಅಭಿನಯದ ಸೋಲ್ಜರ್ ಚಿತ್ರದಲ್ಲಿ ಜೋಜೊ ಪಾತ್ರಕ್ಕೆ ಹೆಸರುವಾಸಿಯಾದ ನಟ ಜೀತು ವರ್ಮಾ ಅವರ ಮೇಲೆ ಮೌಂಟ್ ಅಬುವಿನಿಂದ ಜೈಪುರಕ್ಕೆ ಹೋಗುವಾಗ ದಾಳಿ ನಡೆಸಲಾಯಿತು. ಅಪರಿಚಿತ ದಾಳಿಕೋರರು ಅವರ ಕಾರಿಗೆ ಕಲ್ಲು ಎಸೆದು ಹಾನಿಗೊಳಿಸಿದ್ದರು. ಜೀತು ಅವರನ್ನು ಉದಯಪುರ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು, ನಂತರ ಚಿಕಿತ್ಸೆಗಾಗಿ ಮುಂಬೈಗೆ ವಿಮಾನದಲ್ಲಿ ಕರೆದೊಯ್ಯಲಾಯಿತು.