ರಾಯಚೂರು: ಇಲ್ಲಿನ ಎಪಿಎಂಸಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿದ್ದು ರಾಜ್ಯಮಟ್ಟದಲ್ಲಿ ತನಿಖೆ ನಡೆಸಬೇಕೆಂದು ರಾಯಚೂರು ನಗರ ಉಸ್ಮಾನಿಯಾ ತರಕಾರಿ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ಈ ಕುರಿತು ಸಂಘದ ಅಧ್ಯಕ್ಷ ಎನ್.ಮಹಾವೀರ್ ಜೈನ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಎಪಿಎಂಸಿ ನಿವೇಶನದಲ್ಲಿ ಅಕ್ರಮ ನಡೆದಿದೆ. ವ್ಯಾಪಾರಸ್ಥರಿಗೆ ನೀಡಬೇಕಾಗಿದ್ದ ನಿವೇಶನಗಳು ರಿಯಲ್ ಎಸ್ಟೇಟ್ ಮಾಡುವರಿಗೆ, ಬಟ್ಟೆ ವ್ಯಾಪಾರಿ, ತರಕಾರಿ ಮಾರಾಟಗಾರರಲ್ಲದವರಿಗೆ ನೀಡಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ದೂರು ನೀಡಿದ್ದರೂ ಜಿಲ್ಲಾಧಿಕಾರಿ ಹಾಗೂ ಎಪಿಎಂಸಿ ಕಾರ್ಯದರ್ಶಿಗಳು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಬಗ್ಗೆ ಹಿಂದಿನ ಎಪಿಎಂಸಿ ಕಾರ್ಯದರ್ಶಿಗಳಿಗೆ ದೂರು ನೀಡಿದರೂ ತನಿಖೆ ಮಾಡಲಿಲ್ಲ. ಬದಲಾಗಿ ಹಾರಿಕೆಯ ಉತ್ತರ ನೀಡಿದ್ದಾರೆ. ಮಹಮ್ಮದ್ ಇಕ್ಬಾಲ್ ಸೇರಿದಂತೆ ಹಲವರು ಕಾನೂನು ಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಇಂದಿನ ಜಿಲ್ಲಾಧಿಕಾರಿ ಹಾಗೂ ಇಂದಿನ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದು ತನಿಖೆ ನಡೆಸಲು ಒತ್ತಾಯಿಸಿದ್ದು, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದರು.