ರಾಯಚೂರು: ಕೃಷಿ ಉತ್ಪನ್ನ ಮಾರುಕಟ್ಟೆಯ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಹಮಾಲರು, ಕೂಲಿ-ಕಾರ್ಮಿಕರು ಕೆಲಸವಿಲ್ಲದೇ ಪರದಾಡುತ್ತಿದ್ದಾರೆ. ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ದಿಢೀರ್ ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ಆವರಣದ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಕಾರ್ಮಿಕರು, ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಭತ್ತದ ಸೀಸನ್ ಇರುವುದರಿಂದ ಹೆಚ್ಚಿನ ಮೂಟೆಗಳು ಬರುತ್ತಿದ್ದವು. ಅವುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಲಾಗುತ್ತಿತ್ತು. ಇದರಿಂದ ಹಮಾಲರ ಅವಶ್ಯಕತೆ ಇತ್ತು. ಈಗ ನೇರವಾಗಿ ಆಯಾ ಮಿಲ್ಗಳಿಗೆ ಸರಕು ಸಾಗಣೆ ಮಾಡುತ್ತಿದ್ದಾರೆ. ನಮ್ಮ ಉದ್ಯೋಗಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ ಎಂದು ಮನವಿ ಮಾಡಿದರು.
ಜಿಲ್ಲೆಯ ಇತರೆಡೆಯಿಂದ ಭತ್ತ, ಕಡಲೆ, ತೊಗರಿ, ಈರುಳ್ಳಿ ಬೆಳೆ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಬದಲಾದ ವಾತಾವರಣದಿಂದ ಎಪಿಎಂಸಿ ಕಾರ್ಯಚಟುವಟಿಕೆ, ವ್ಯವಹಾರ ಸಂಪೂರ್ಣ ಬದಲಾಗಿದೆ ಎಂದರು.
ರೈತರು ತರುವ ಬೆಳೆಯ ಗುಣಮಟ್ಟ ಹಾಗೂ ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಹಮಾಲರು, ಕೂಲಿ ಕಾರ್ಮಿಕರು ಚೀಲಗಳನ್ನು ತೂಕ ಮಾಡುತ್ತಿದ್ದರು. ಇದೆಲ್ಲವೂ ಸ್ಥಗಿತಗೊಂಡಿದ್ದು, ಕಾರ್ಮಿಕರ ಉದ್ಯೋಗಕ್ಕೆ ಕತ್ತರಿ ಬಿದ್ದಿದೆ.